ದೇಶಕ್ಕೆ ಕೊಡುಗೆ ನೀಡಲು ಸಂಕಲ್ಪ ತೊಡಿ

ಬೀದರ್: ಜು.11:ಯುವಜನರು ದೇಶಕ್ಕೆ ಏನಾದರೂ ಕೊಡುಗೆ ನೀಡಲು ಸಂಕಲ್ಪ ತೊಡಬೇಕು ಎಂದು ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೊ. ಶಿವಕುಮಾರ ಉಪ್ಪೆ ನುಡಿದರು.

ಓಂ ಸಿದ್ಧಿ ವಿನಾಯಕ ಪದವಿ ಕಾಲೇಜು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ವತಿಯಿಂದ ಇಲ್ಲಿಯ ಹಳ್ಳದಕೇರಿಯ ಪೋಚಮ್ಮ ಮಂದಿರದ ಆವರಣದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಸೇವೆಗೆ ಕಂಕಣ ಬದ್ಧರಾಗಿರಬೇಕು. ಆದರ್ಶ ಪ್ರಜೆಯಾಗಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ದೇಶಾಭಿಮಾನ, ಸಾಮಾಜಿಕ ಜವಾಬ್ದಾರಿ ಅರಿವು, ಶಿಸ್ತು, ಸಮಯ ಪ್ರಜ್ಞೆ ಮೂಡಿಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಯುವಕರು ಪರಿಸರ ಪ್ರೀತಿ ಬೆಳೆಸಿಕೊಳ್ಳಬೇಕು. ಮರ, ಗಿಡಗಳನ್ನು ಬೆಳೆಸಬೇಕು. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಭಾರತೀಯ ಕುಟುಂಬ ಯೋಜನಾ ಸಂಘದ ಬೀದರ್ ಶಾಖೆ ಅಧ್ಯಕ್ಷ ಡಾ. ನಾಗೇಶ ಪಾಟೀಲ ನುಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಸಿದ್ರಾಮ ಬಿಚಕುಂದೆ ಮಾತನಾಡಿದರು. ಸ್ವರ್ಣ ಕನ್‍ಸ್ಟ್ರಕ್ಷನ್ಸ್ ಮುಖ್ಯಸ್ಥ ವೀರಶೆಟ್ಟಿ ಮಣಗೆ, ಕಾಲೇಜು ನಿರ್ದೇಶಕ ಡಾ. ನಿತೇಶಕುಮಾರ ಬಿರಾದಾರ, ರಾಜ್ಯ ಸಂಪನ್ಮೂಲ ವ್ಯಕ್ತಿ ಆರ್.ಕೆ. ಚಾರಿ, ಪ್ರಾಧ್ಯಾಪಕ ಬಾಪುರಾವ್, ಮಮತಾ ಕೆನಡಿಕರ್, ರತಿದೇವಿ, ನೀತಾ ಕುಲಕರ್ಣಿ, ಅಂಬರೀಷ್ ಪಾಟೀಲ, ಸುಮಾ ರಾಮತೀರ್ಥ, ಅಶ್ವಿನಿ ಪಾಟೀಲ, ರೇಣುಕಾ ಜಿರೋಬೆ, ಸುಧಾರಾಣಿ, ಸಂತೋಷಿ, ಮಿಲಿಂದ್, ತಿಪ್ಪಣ್ಣ ಮತ್ತಿತರರು ಇದ್ದರು.

ಆರೂಢ ನಿರೂಪಿಸಿದರು. ವಿಶಾಲ್ ಸ್ವಾಗತಿಸಿದರು. ಜ್ಯೋತಿ ವಂದಿಸಿದರು.

ಶಿಬಿರದ ನಿಮಿತ್ತ ಕಾಲೇಜು ವಿದ್ಯಾರ್ಥಿಗಳು ಜುಲೈ 16 ರ ವರೆಗೆ ವಿವಿಧ ಚಟುವಟಿಕೆ ಕೈಗೊಳ್ಳಲಿದ್ದಾರೆ.