ದೇಶಕ್ಕೆ ಅತ್ಯುತ್ತಮ ಪ್ರಧಾನಿ ನೀಡಿದ ಹೆಗ್ಗಳಿಕೆ ಬಿಜೆಪಿಯದ್ದು

 ದಾವಣಗೆರೆ. ಮೇ.೩೧; ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಹಲವಾರು ಗಮನಾರ್ಹ ಬದಲಾವಣೆಗಳಾಗಿವೆ‌. ನಮ್ಮ ದೇಶದ ಕೀರ್ತಿ ಜಗತ್ತಿನಾದ್ಯಂತ ಪಸರಿಸಿದೆ‌. ಭಾರತ ದೇಶ ವಿಶ್ವದಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಇಂತಹ ಸರ್ವ ಶ್ರೇಷ್ಠ ಪ್ರದಾನಿಯನ್ನು ದೇಶಕ್ಕೆ ನೀಡಿದ ಕೀರ್ತಿ ಬಿಜೆಪಿ ಪಕ್ಷದ ಹೆಗ್ಗಳಿಕೆ ಎಂದು  ಶಾಸಕ ಎಸ್‌.ಎ.ರವೀಂದ್ರನಾಥ್ ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಯಶಸ್ವಿಯಾಗಿ ಏಳು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಪಾಲಿಕೆಯ 33 ನೇ ವಾರ್ಡ್‌ನಲ್ಲಿ ಕೋವಿಡ್ ಸಂಬಂಧಿತ ವಿವಿಧ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆರಂಭದಲ್ಲಿ ಜನರು ಲಸಿಕೆ ಪಡೆಯಲು ಉದಾಸೀನತೆ ತೋರಿಸಿದ್ದೇ ಇಂದು ಲಸಿಕೆಗಾಗಿ ಹಾಹಾಕಾರ ಪಡುವಂತಾಗಿದೆ. ಆದರೂ ಸರಕಾರದಿಂದ ವ್ಯವಸ್ಥಿತವಾಗಿ ಲಸಿಕೆಗಳ ಸರಬರಾಜು ಮಾಡಲಾಗುತ್ತಿದೆ. ಎಲ್ಲರಿಗೂ ಲಸಿಕೆ ಸಿಗಲಿದೆ. ಸಾರ್ವಜನಿಕರು ತಾಳ್ಮೆ ಕಳೆದುಕೊಳ್ಳದೇ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲು ಮನವಿ ಮಾಡಿದರು‌.ಮೇಯರ್ ಎಸ್‌ ಟಿ ವೀರೇಶ್ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ದಾನ ಮತ್ತು ಸೇವೆಯು ಪ್ರಧಾನವಾದ ಸ್ಥಾನವನ್ನು ಪಡೆದಿವೆ. ಕೆ.ಎಮ್.ಸುರೇಶ್ ಮತ್ತು ಕೆ.ಎಮ್.ವೀರೇಶ್ ಸಹೋದರರು ಸಾಮಾಜಿಕ ಕಳಕಳಿಯ ಸೇವಾ ಚಟುವಟಿಕೆಗಳ ಮೂಲಕ ನರೇಂದ್ರ ಮೋದಿಯವರ ಏಳು ವರ್ಷಗಳ ಸಾಧನೆಯನ್ನು ಜನರಿಗೆ ತಿಳಿಸುತ್ತಿದ್ದಾರೆ. ಇದು ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ  ಕೆ.ಎಮ್.ಸುರೇಶ್  ಮಾತನಾಡಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಗಳಾಗಿ ಏಳು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.  ಹಲವು ಮಹತ್ವದ ಕಾರ್ಯಗಳನ್ನು ಮಾಡುವ ಮೂಲಕ ದೇಶದ ಜನ ಮೆಚ್ಚುವ ರೀತಿಯಲ್ಲಿ ಆಡಳಿತ ಮಾಡಿದ್ದಾರೆ ಎಂದರು.ಈ ವೇಳೆ ಮಾಜಿ ಮುಖ್ಯ ಸಚೇತಕರು ಡಾ.ಎ.ಹೆಚ್‌‌.ಶಿವಯೋಗಿ ಸ್ವಾಮಿ,ವಿಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ , ಪಾಲಿಕೆ ಸದಸ್ಯರಾದ ಕೆ.ಎಮ್‌.ಸುರೇಶ್, ಎಸ್.ಮಂಜುನಾಥ್ ನಾಯ್ಕ್, ಪಿ‌.ಎಸ್.ಬಸವರಾಜ್, ಧನ್ಯಕುಮಾರ್ ಇತರರಿದ್ದರು.