ದೇಶಕಟ್ಟಿದ್ದು ಕಾಂಗ್ರೆಸ್ ಲೂಟಿ ಮಾಡಿದ್ದು ಬಿಜೆಪಿ; ಡಿ.ಬಸವರಾಜ್ ಆರೋಪ

ದಾವಣಗೆರೆ. ಜು.೨೭; ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಜನಮತ” ಇಲ್ಲದ, ಶಾಸಕರ ಖರೀದಿ, ಆಧಾರಿತ, ಹೊಲಸು ಸರ್ಕಾರವೆಂದು ಕೆಪಿಸಿಸಿ ವಕ್ತಾರರಾದ ಡಿ. ಬಸವರಾಜ್ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಒಂದು ವರ್ಷ ಆಡಳಿತ ವೈಖರಿಗೆ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶಕಟ್ಟಿದ್ದು ಕಾಂಗ್ರೆಸ್ ಲೂಟಿ ಮಾಡಿದ್ದು ಬಿಜೆಪಿ ಎಂದು ಆರೋಪಿಸಿದರು.ಬಿಜೆಪಿ ಸರ್ಕಾರದ ಹುಟ್ಟೇ ಅಪವಿತ್ರವಾಗಿರುವದರಿಂದ ಇದರ ಸಾಧನೆಯು ಅದೇ ದಾರಿ ಹಿಡಿದಿದೆ, ಶಾಸಕರ ಖರೀದಿಗೆ ಹೂಡಿದ  ಬಂಡವಾಳವನ್ನು ಬಡ್ಡಿ ಸಮೇತ ವಸೂಲಿ ಮಾಡಲು ರಾಜ್ಯದ ತೆರಿಗೆದಾರರ ತಲೆ ಬೋಳಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.ಸರ್ಕಾರ ಅಭಿವೃದ್ಧಿ ಯೋಜನೆಗಳ ಜಾರಿಯಲ್ಲಿ ಗುತ್ತಿಗೆದಾರರಿಂದ ಶೇ.೪೦ ಕಮಿಷನ್ ದಂಧೆ ನಡೆಸುತ್ತಿದ್ದಾರೆಂದು ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಡಿ. ಕೆಂಪಣ್ಣನವರು ಬಹಿರಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ದೂರುಕೊಟ್ಟರೂ  ಸರ್ಕಾರಕ್ಕೆ ಇದರ ಪರಿವೆಯೇ ಇಲ್ಲ. ಇದರ ಪರಿಣಾಮ ಬಹಿರಂಗ ಭ್ರಷ್ಟಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಲ್ಲರೂ ಲೈಸೆನ್ಸ್ ನೀಡಿದಂತಾಗಿದೆ. ರಾಜ್ಯದಲ್ಲಿ ನೆರೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ, ಬಡಮಕ್ಕಳ ಪೋಷಕಾಂಶ ಅಭಿವೃದ್ಧಿ ಯೋಜನೆಗೆ ನೀಡಲು ಹಣವಿಲ್ಲ. ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ನೀಡಲು ಹಣವಿಲ್ಲ, ಆದರೆ ಸಂಘ ಪರಿವಾರದ ಯೋಜನೆಗಳ ಜಾರಿಗೆ ಹಣದ ಕೊರತೆಯೇ ಇಲ್ಲ. ರಾಜ್ಯದಲ್ಲಿ ಧರ್ಮ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಮೂಲಕ ಮುಗ್ಧ ಮನಸ್ಸುಗಳನ್ನು ಕಲುಷಿತಗೊಳಿಸುವ ಸತತ ಯತ್ನ ನಡೆಯುತ್ತಿದೆ. ರಾಷ್ಟ್ರಧ್ವಜದ ಹೆಸರಿನಲ್ಲಿ ರಾಜಕೀಯ ಮಾಡುವ ಕೀಳು ದರ್ಜೆಯ ಗಿಮಿಕ್‌ಗಳಿಗೆ ಸೀಮಿತವಾಗಿರುವ ಇವರ ಆಡಳಿತದಲ್ಲಿ ಬಡವರ ಗೋಳು ಕೇಳುವವರಿಲ್ಲ, ಇದು ಈ ಸರ್ಕಾರದ ಸಾಧನೆ, ಬಿಜೆಪಿ ಅಧಿಕಾರ ದಾಹ ಮೇರೆ ಮೀರಿದ್ದು ಅದರ ಪರಿಣಾಮ ಬಡ ಜನರ ಮೇಲೆ ಆಗುತ್ತಿದೆ. ದಿನ ಬಳಕೆಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ ಪೆಟ್ರೋಲ್, ಡಿಸೇಲ್,  ಅಡುಗೆ ಸಿಲಿಂಡರ್ ದರ ಬಡವರ ಕೈಗೆ ಎಟುಕುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದಿಂದ ನೇಮಕಮಾಡಬೇಕಾಗಿದ್ದ 545 ಪೋಲೀಸ್  ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ನೂರಾರು ಕೋಟಿ ಲಂಚ ಪಡೆಯಲಾಗಿದೆ, ಎಡಿಜಿಪಿ ಯಂತಹ ಉನ್ನತ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿ ಜೈಲು ಸೇರಿದ್ದಾರೆ. ಆದರೆ ರಾಜ್ಯದಲ್ಲಿನ ಬಹುತೇಕ ಮಂತ್ರಿಗಳು ಇದರಲ್ಲಿ ಇದ್ದರೂ ಅವರ ಬಗ್ಗೆ ತನಿಖೆ ಇಲ್ಲ.ವರ್ಷವೀಡಿ ಧರ್ಮ ಧರ್ಮಗಳ ಮಧ್ಯೆ ಸರ್ಕಾರವೇ ವಿಷಬೀಜ ಬಿತ್ತಿ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿದೆ.ಬಿಜೆಪಿಯವರು ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತ ಬಂದರೆ ಅದು ಡಬಲ್ ಎಂಜಿನ್ ಸರ್ಕಾರವಾಗಲಿದ್ದು, ರಾಜ್ಯದ ಅಭಿವೃದ್ಧಿ ಆಗಲಿದೆ ಎಂದು ಹೇಳುತ್ತಿದ್ದರು. ಆದರೆ ಡಬಲ್ ಇಂಜಿನ್  ಆಗುವ ಬದಲು ಎರಡು ಸರ್ಕಾರಗಳು ಡಬ್ಬಾ ಸರ್ಕಾರವಾಗಿದೆ ಎಂದು ದೂರಿದರು.ಸುದ್ದಿಗೋಷ್ಠಿಯಲ್ಲಿ ಮಹಮ್ಮದ್ ಜಿಕ್ರಿಯಾ,ಕೆ.ಎಂ ಮಂಜುನಾಥ್, ಡಿ ಶಿವಕುಮಾರ್ ಇದ್ದರು.

Attachments area