
ಕೂಡ್ಲಿಗಿ. ಮೇ 19 :- ದೇಶದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ 91ನೇ ಜನ್ಮ ದಿನಾಚರಣೆ ಅಂಗವಾಗಿ ಕೂಡ್ಲಿಗಿ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುರುವಾರ ಹಣ್ಣು, ಬ್ರೆಡ್ ನ್ನು ವಿತರಿಸಲಾಯಿತು.
ತಾಲೂಕು ಘಟಕದ ಜೆಡಿಎಸ್ ಅಧ್ಯಕ್ಷ ಬ್ಯಾಳಿ ವಿಜಯಕುಮಾರ ಗೌಡ ಮಾತನಾಡಿ, ರೈತರು, ಬಡವರು ಸೇರಿ ಎಲ್ಲಾ ವರ್ಗದವರ ಬಗ್ಗೆ ಕಾಳಜಿ ಇರುವಂಥ ಮುತ್ಸದ್ಧಿ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯದ ಅಭಿವೃದ್ಧಿಗೆ ಮಹತ್ವ ಕೊಡುಗೆ ನೀಡಿದವರಾಗಿದ್ದು ಅವರ ಆಡಳಿತಾವಧಿಯಲ್ಲಿ ಅನೇಕ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅಲ್ಲದೆ, ಈಗಲೂ ರಾಜ್ಯದ ಅಭಿವೃದ್ಧಿಯ ಚಿಂತನೆ ಮಾಡುವುದರ ಜತೆಗೆ ಎಲ್ಲಾ ಸಮುದಾಯದ ಜನರ ಏಳಿಗೆಯನ್ನೇ ಬಯಸುತ್ತಿರುವ ದೇವೇಗೌಡ ಅವರ ಆರೋಗ್ಯದ ಆಯಸ್ಸು ಇನ್ನಷ್ಟು ವೃದ್ಧಿಯಾಗಲಿ ಎಂದು ತಿಳಿಸಿದರು.
ಜೆಡಿಎಸ್ ಎಸ್ಟಿ ವಿಭಾಗದ ವಿಜಯನಗರ ಜಿಲ್ಲಾಧ್ಯಕ್ಷ ಗುಪ್ಪಾಲ್ ಕಾರಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೂ ಸಮಾಜದ ಒಳಿತಿಗಾಗಿ ಮತ್ತು ರೈತರಿಗೆ ಬೆಂಬಲವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದ ಎಚ್.ಡಿ.ದೇವೇಗೌಡರು ರಾಜಕಾರಣದಲ್ಲಿ ಹೆಸರುವಾಸಿ. ಅಲ್ಲದೆ,ತೃತೀಯ ರಂಗ ಕಟ್ಟಿಕೊಂಡು ದೇಶದ ಪ್ರಧಾನಿಯಾಗಿ ಉತ್ತಮ ಆಡಳಿತ ನಡೆಸಿದ ದೇವೇಗೌಡರು ದೇಶ ಕಂಡ ಸಜ್ಜನ ರಾಜಕಾರಣಿ ಎಂದು ಬಣ್ಣಿಸಿದರು . ಈ ಸಂದರ್ಭದಲ್ಲಿ ಜೆಡಿಎಸ್ ಎಸ್ಟಿ ವಿಭಾಗದ ತಾಲೂಕು ಅಧ್ಯಕ್ಷ ಚಿರತಗುಂಡು ಮಾರಪ್ಪ, ಯುವ ಘಟಕದ ಅಧ್ಯಕ್ಷ ಮಾಳಗಿ ರಾಘವೇಂದ್ರ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪೂರ‍್ಯಾನಾಯ್ಕ್, ಪಪಂ ಸದಸ್ಯರಾದ ತಳಾಸ್ ವೆಂಕಟೇಶ್ ಸೇರಿ ಆಸ್ಪತ್ರೆ ವೈದ್ಯರು ಇದ್ದರು.