ದೇವೇಗೌಡರ ಆದೇಶಕ್ಕೆ ತಲೆಬಾಗಿ ಚುನಾವಣೆಗೆ ಸ್ಪರ್ಧೆ:ಎಂವಿವಿ

ಮಧುಗಿರಿ, ನ. ೨೫- ದೇವೇಗೌಡರ ಕುಟುಂಬಕ್ಕೆ ನೋ ಎನ್ನಲು ಆಗುವುದಿಲ್ಲ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮಧುಗಿರಿಯಿಂದ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ಸ್ಪಷ್ಟಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಕಾರಣಗಳಿಂದಾಗಿ ಮತ್ತು ನನ್ನ ಕುಟುಂಬದವರೂ ಸಹ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎನ್ನುತ್ತಿದ್ದರು. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸಬಾರದು ಎಂದು ಈ ಹಿಂದೆ ತೀರ್ಮಾನಿಸಿದ್ದೆ. ಆದರೆ ಮಾಧ್ಯಮಗಳಲ್ಲಿ ವರದಿ ಬಂದ ನಂತರ ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನಲ್ಲಿರುವ ನಮ್ಮ ಮನೆಗೆ ಮುಂಭಾಗ ನಾನು ಸ್ಪರ್ಧಿಸಲೇಬೇಕೆಂದು ಹಠ ಹಿಡಿದು ಧರಣಿ ನಡೆಸಿದ್ದರು. ಅಲ್ಲದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ನನ್ನ ಮತ್ತು ನನ್ನ ಮಗನ ಜತೆ ಮಾತನಾಡಿದ್ದು, ಎಲ್ಲ ಗೊಂದಲಗಳಿಗೆ ಹೈ ಕಮಾಂಡ್ ತೆರೆ ಎಳೆದಿದೆ. ಹೈಕಮಾಂಡ್ ಸೂಚನೆ ಮತ್ತು ಕಾರ್ಯಕರ್ತರ ಒತ್ತಾಯಕ್ಕೆ ಮಣಿದಿದ್ದು, ನಾನೇ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಮುಂಬರುವ ಚುನಾವಣೆಯಲ್ಲೂ ನಾನೇ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು. ಮಧುಗಿರಿಯನ್ನು ಜಿಲ್ಲೆಯನ್ನಾಗಿಸು ವುದು ಮತ್ತು ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಮಾಡಿದಾಗ ಮಾತ್ರ ನನಗೆ ಸಮಾಧಾನ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭಾಧ್ಯಕ್ಷ ತಿಮ್ಮರಾಯಪ್ಪ, ಪುರಸಭಾ ಸದಸ್ಯರಾದ ಚಂದ್ರಶೇಖರ್‌ಬಾಬು, ನಾರಾಯಣ್, ನರಸಿಂಹಮೂರ್ತಿ, ಮುಖಂಡರುಗಳಾದ ಗೋವಿಂದರೆಡ್ಡಿ, ಲಕ್ಷ್ಮೀನರಸಿಂಹರೆಡ್ಡಿ, ರಾಮಚಂದ್ರಪ್ಪ, ಎಸ್.ಆರ್.ನಾಗರಾಜು, ಜಬೀವುಲ್ಲಾ, ಬಾವಿಮನೆ ಕಾಂತಣ್ಣ, ಹಂಸರಾಜ್, ಎಸ್ಸಿ ಘಟಕದ ಅಧ್ಯಕ್ಷ ಗುಂಡುಗಲ್ ಶಿವಣ್ಣ, ನಾಸೀರ್, ಕಂಬತ್ತನಹಳ್ಳಿ ರಘು, ಚೌಡಪ್ಪ ಉಪಸ್ಥಿತರಿದ್ದರು.