ಕಲಬುರಗಿ,ಅ.24: ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷದ ಸಂಘಟನೆ ಕೆಟ್ಟು ಹೋಯಿತು. ಇದರಿಂದಾಗಿ 37 ಶಾಸಕರನ್ನು ಹೊಂದಿದ್ದ ಪಕ್ಷವು ಈಗ 19 ಸ್ಥಾನಗಳಿಗೆ ಕುಸಿದಿದೆ. ಪಕ್ಷದ ವರಿಷ್ಠರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕುರಿತು ಇಬ್ರಾಹಿಂ ಅವರಿಗೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೂ ಸಹ ಈಗ ವರಿಷ್ಠರ ವಿರುದ್ಧ ಮಾತನಾಡುತ್ತಿರುವುದು ಖಂಡನಾರ್ಹ. ಕೂಡಲೇ ವಿರೋಧಿ ಹೇಳಿಕೆಗಳನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಸಿ.ಎಂ. ಇಬ್ರಾಹಿಂ ಅವರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯ ವಕ್ತಾರ ದೇವೆಗೌಡ ತೆಲ್ಲೂರ್ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡಬಾರದು. ಇನ್ನೂ ಒಂದು ಹೆಜ್ಜೆ ಮುಂದೆ ಇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಬೆಂಬಲಿಸಿದರು.
ಕಳೆದ 16ರಂದು ಕರೆದ ಸಭೆಗಿಂತ ಮೊದಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕರೆದ ಪಕ್ಷದ ಶಾಸಕರು, ಜಿಲ್ಲಾಧ್ಯಕ್ಷರು, ಕೋರ್ ಕಮೀಟಿ ಅಧ್ಯಕ್ಷರು ಮತ್ತು ಸದಸ್ಯರು, ರಾಜ್ಯ ಮುಖಂಡರು ಪಾಲ್ಗೊಂಡ ಸಭೆಯಲ್ಲಿ ಸಿ.ಎಂ. ಇಬ್ರಾಹಿಂ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಹಮತ ವ್ಯಕ್ತಪಡಿಸಿದರು. ಈಗ ಆಕ್ಷೇಪ ಎತ್ತುತ್ತಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆದಾಗ್ಯೂ, ಅಕ್ಟೋಬರ್ 16ರ ಸಭೆಯಲ್ಲಿ ಬೇರೆ ಪಕ್ಷದ ನಾಯಕರ ಉಪಸ್ಥಿತಿ ಕಂಡುಬಂತು. ಆ ಸಭೆಯಲ್ಲಿ ಜೆಡಿಎಸ್ ಪಕ್ಷದ ಯಾವೊಬ್ಬ ಶಾಸಕರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧ್ಯಕ್ಷರುಗಳು ಯಾರೂ ಪಾಲ್ಗೊಂಡಿರಲಿಲ್ಲ. ಆದಾಗ್ಯೂ, ಸಭೆಯ ನಂತರ ಪಕ್ಷ ವಿರೋಧಿ ಹೇಳಿಕೆಯನ್ನು ಇಬ್ರಾಹಿಂ ಅವರು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸಿ.ಎಂ. ಇಬ್ರಾಹಿಂ ಅವರು ಹೇಳಿದ ಹಾಗೆ ಅವರ ನೇತೃತ್ವದಲ್ಲಿ ಮುಸ್ಲಿಂರು ಮತ ಹಾಕಿರುವುದರಿಂದ ಕುಮಾರಸ್ವಾಮಿ ಅವರು 20,000 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. 2018ರ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಅದಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದಾರೆ. ಆಗ ಸಿ.ಎಂ. ಇಬ್ರಾಹಿಂ ಅವರು ಪಕ್ಷದಲ್ಲಿ ಇರಲಿಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.
ಸಿ.ಎಂ. ಇಬ್ರಾಹಿಂ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೆಗೌಡ ಅವರು ಟಿ.ಎ. ಶರವಣ್ ಅವರಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಾಗ ಹುಣಸಿನ ಬೀಜ ಸಂದಾಯವಾಗಿದೆ ಎಂದು ಆರೋಪಿಸಿದ್ದರು. ಇಬ್ರಾಹಿಂ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದಾಗ ಅನೇಕ ನಿಷ್ಠಾವಂತ ಕಾರ್ಯಕರ್ತರು ಮರಗಿದರು. ಅವರು ಕಾಂಗ್ರೆಸ್ ಬಿಡುವಾಗ ಮಾಧ್ಯಮಗಳ ಮುಂದೆ ಅಳುತ್ತಾ ನನಗೆ ಸಾಲ ಹೆಚ್ಚಾಗಿದೆ. ಸಿದ್ಧರಾಮಯ್ಯ ಅವರು ಮೋಸ ಮಾಡಿದ್ದಾರೆ ಎಂದು ಗೋಳಿಟ್ಟರು. ಆನಂತರ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಪಡೆದರು. ಆ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಿ.ಎಂ. ಇಬ್ರಾಹಿಂ ಅವರ ಬೆಂಬಲಿಗರು ಜಿಲ್ಲೆಯ ಪದಾಧಿಕಾರಿಗಳ ನೇಮಕ ಮಾಡುವಾಗ ಪ್ರತಿಯೊಂದು ಹುದ್ದೆಗೂ ಹುಣಸಿನ ಬೀಜ ಡೀಲ್ ಆಗಿದೆ. ಅದೂ ಸಹ ಇಬ್ರಾಹಿಂ ಅವರ ಅಣತಿಯ ಮೇರೆಗೆ ಆಗಿದೆ. 35 ವರ್ಷಗಳ ಕಾಲ ನಿಷ್ಠಾವಂತ ಕಾರ್ಯಕರ್ತನಿಗೆ ಅವರ ಬೆಂಬಲಿಗರು ದೂರವಾಣಿ ಕರೆ ಮಾಡಿ ನಿಮಗೆ ಅಧ್ಯಕ್ಷ ಸ್ಥಾನ ಕೊಡುತ್ತೇವೆ. ಹುಣಸಿನ ಬೀಜ ಇಷ್ಟು ಬೇಕು?, ಮಹಾಪ್ರಧಾನ ಕಾರ್ಯದರ್ಶಿ ಮಾಡಬೇಕಾದರೆ ಇಷ್ಟು ಹುಣಸಿನ ಬೀಜ ಬೇಕು ಎಂದು ಕೇಳಿದರು. ಆಗ ನಮಗೆ ಎಷ್ಟು ನೋವಾಗಿರಬಹುದು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಇಬ್ರಾಹಿಂ ಅವರನ್ನು ರಾಜ್ಯಕ್ಕೆ ಪರಿಚಯಿಸಿದ್ದೇ ದೇವೆಗೌಡರು. ಮೂಲೆಯಲ್ಲಿದ್ದ ಅವರನ್ನು ತಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನಾಗಿ ಮಾಡಿದರು. ಈಗ ಉಂಡ ಮನೆಯ ಜಂತಿ ಎಣಿಸುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಅವರು, ಪುತ್ರವ್ಯಾಮೋಹ ಇದ್ದರೆ ದೇವೆಗೌಡರು ಆಗಲೇ ಅವರ ಪುತ್ರರನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತಿದ್ದರು ಎಂದು ತಿರುಗೇಟು ನೀಡಿದರು.
ಪಕ್ಷಕ್ಕೆ ಸಿ.ಎಂ. ಇಬ್ರಾಹಿಂ ಅವರಂತಹವರ ಅವಶ್ಯಕತೆ ಇಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾಖಾನ್ ಅವರಂತಹ ಒಳ್ಳೆಯ ಸಚ್ಚಾರಿತ್ರ್ಯದ ಜಾತ್ಯಾತೀತ ನಾಯಕರ ಅಗತ್ಯವಿದೆ. ಇಬ್ರಾಹಿಂ ಹಾಗೂ ಅವರ ಬೆಂಬಲಿಗರು ಪಕ್ಷ ಬಿಟ್ಟು ಹೋದ ನಂತರ ರಾಜ್ಯದ ಹಾಗೂ ಜಿಲ್ಲಾ ಕಚೇರಿಗಳನ್ನು ತೊಳೆದೇ ಸಾರಿಸುತ್ತೇವೆ. ಇನ್ನು ಮುಂದೆ ಪಕ್ಷದ ವರಿಷ್ಠರ ವಿರುದ್ಧ ಹೇಳಿಕೆ ಕೊಡಬಾರದು. ಒಂದು ವೇಳೆ ಮುಂದುವರೆಸಿದರೆ ಇಬ್ರಾಹಿಂ ಅವರಿಗೆ ಕಪ್ಪು ಬಾವುಟ ತೋರಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಬೀರಬಟ್ಟೆ ಮುಂತಾದವರು, ಉಪಸ್ಥಿತರಿದ್ದರು.