ದೇವಿ ಪುರಾಣ ಸಮಾರೋಪ

ಹೂವಿನಹಡಗಲಿ: ಅ.28. ತಾಲೂಕಿನ ಉತ್ತಂಗಿಯ ಕರಿಬಸವೇಶ್ವರ ದೇವಸ್ಥಾನದಲ್ಲಿ ದಸರಾ ಅಂಗವಾಗಿ ಆಯೋಜಿಸಿದ್ದ 13ನೇ ವರ್ಷದ ದೇವಿ ಪುರಾಣ ಕಾರ್ಯಕ್ರಮ ಸಮಾರೋಪಡೊಂಡಿತು.
ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ಶಂಕರಮಠದ ಶಿವಶಂಕರ ಸ್ವಾಮೀಜಿ ಮಾತನಾಡಿ, ಗ್ರಾಮದ ಎಲ್ಲ ವರ್ಗದ ಜನರು ಸೇರಿ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸುವುದರಿಂದ ಸೌಹಾರ್ದ ವಾತಾವರಣ ರೂಪುಗೊಳ್ಳುತ್ತದೆ. ಪುರಾಣ, ಪ್ರವಚನ ಆಲಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.
ಕರಿಬಸವೇಶ್ವರ ದೇವಸ್ಥಾನದ ಈರಮ್ಮತಾಯಿ ಮಾತನಾಡಿ, ಉತ್ತಂಗಿ ಸುತ್ತಮುತ್ತಲ ಗ್ರಾಮಗಳ ಭಕ್ತರ ಸಹಕಾರದಿಂದ 13 ವರ್ಷಗಳಿಂದ ದೇವಿ ಪುರಾಣ ಆಯೋಜಿಸುತ್ತಾ ಬಂದಿದ್ದೇವೆ. ಬರುವ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ಮುಂದುವರಿಸಬೇಕು ಎಂದು ಹೇಳಿದರು.
ಪ್ರಕಾಶ ಶಾಸ್ತ್ರಿ ಪುರಾಣ ಮಂಗಲಗೊಳಿಸಿದರು. ಮೇಟಿ ನಾಗಜ್ಜ, ಕೆ.ಎಚ್. ನಾಗನಗೌಡ, ಯರಿಸ್ವಾಮಿ ಇದ್ದರು. ಕಲಾವಿದರಾದ ಸಂಗಮೇಶ ಉತ್ತಂಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.