ದೇವಿ ಆರಾಧನೆ ಜೊತೆಗೆ ಸ್ತ್ರೀಯರನ್ನು ಗೌರವಿಸಿ

ಮರಿಯಮ್ಮನಹಳ್ಳಿ, ಅ.28: ಚೈತನ್ಯ ಸ್ವರೂಪಳಾದ ದೇವಿ ಆರಾಧನೆಯ ಜೊತೆಗೆ ನಮ್ಮೊಟ್ಟಿಗೆ ನಮ್ಮೆಲ್ಲರನ್ನು ಪೋಷಿಸಿ ಪಾಲನೆ ಮಾಡುತ್ತಿರುವ ಸ್ತ್ರೀಯರನ್ನೂ ಗೌರವಿಸುವುದೂ ಅಗತ್ಯವಾಗಿದೆ ಎಂದು ಉಪನ್ಯಾಸಕ ಸೋಮೇಶ್ ಅಭಿಪ್ರಾಯಪಟ್ಟರು.
ಅವರು ಮರಿಯಮ್ಮಹಳ್ಳಿಗೆ ಸಮೀಪದ ಜಿ.ನಾಗಲಾಪುರ ಗ್ರಾಮದಲ್ಲಿನ ತಾಯಮ್ಮದೇವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಜರುಗಿದ ದೇವಿಪುರಾಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಾಗಲಾಪುರ ಗ್ರಾಮವು ಸಂಗೀತ ಕಲೆಯ ತವರೂರು. ಎಷ್ಟೋ ಕಲಾವಿದರು ಎಲೆ ಮರೆ ಕಾಯಿಯಂತೆ ಸಂಗೀತ ಸಾಧನೆಯಲ್ಲಿ ತೊಡಗಿಕೊಂಡಿದ್ದಾರೆ. ದೇವಿ ಪುರಾಣದಂತಹ ಯಾವುದೇ ಪುರಾಣ ಕಾವ್ಯಗಳ ಪಠಣೆಯಿಂದ ಮಕ್ಕಳಲ್ಲಿ ಉತ್ತಮ ಭಾಷಾ ಪಾಂಡಿತ್ಯವನ್ನು ಬೆಳೆಸುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲಾವಿದರು ಹಾಗೂ ಕೆ.ಇ.ಬಿ ನೌಕರ ಡಿ.ಪಂಪಾಪತಿ ಮಾತನಾಡಿ, ದೇವಿಪುರಾಣ ಪ್ರವಚನಕ್ಕೆ ಬೆಲೆ ಕಟ್ಟಲಾಗದು. ಇಂತಹ ಕಾರ್ಯಕ್ರಮಗಳು ಬ್ರಹ್ಮ ಜ್ಞಾನವನ್ನು ನೀಡುತ್ತವೆ. ಆಧ್ಯಾತ್ಮಿಕದಲ್ಲಿ ದೇವಮಾರ್ಗವನ್ನು ಗುರು ತೋರುತ್ತಾನೆ. ಇಂತಹ ಗುರು ಪುತ್ರರು ನಾಗಲಾಪುರ ಗ್ರಾಮದಲ್ಲಿ ಮನೆಗೊಬ್ಬರು ದೊರೆಯುತ್ತಾರೆ. ಒಪ್ಪತ್ತೇಶ್ವರ ಮಹಾಸ್ವಾಮಿಗಳು ಈ ನೆಲದಲ್ಲಿ ಆಧ್ಯಾತ್ಮಿಕ ಬೀಜ ಮಂತ್ರವನ್ನು ಬಿತ್ತಿದ್ದಾರೆ. ಯುವ ಪೀಳಿಗೆಯ ಮಕ್ಕಳು ಟಿವಿ, ಮೊಬೈಲ್ ಮಾಧ್ಯಮಗಳಿಂದ ದೂರವಿರಿ ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಲ್ಲಪ್ಪ ಹೆಚ್. ಮಾತನಾಡಿದರು.
ಶರನ್ನವರಾತ್ರಿಯ ಅಂಗವಾಗಿ ಕೊನೆಯ ದಿನದ ಪುರಾಣ ಪ್ರವಚನದಲ್ಲಿ ಕಲಾವಿದರಾದ ಹೆಚ್.ಹುಲುಗಪ್ಪ ಪುರಾಣ ಪಠಣ ಮಾಡಿದರು. ಸುಬ್ರಹ್ಮಣ್ಯ ಪರಮಹಂಸರು ವ್ಯಾಖ್ಯಾನ ಮಾಡಿದರು. ಕಾರ್ಯಕ್ರಮಕ್ಕೆ ಸಿದ್ದಲಿಂಗಪ್ಪ(ವಯೋಲಿನ್), ದುರ್ಗಾದಾಸ್(ಹಾರ್ಮೋನಿಯಂ), ಬ್ರಹ್ಮಪ್ಪ(ತಬಲಾ), ತಿಪ್ಪಣ್ಣ, ಶಶಿಕುಮಾರ್(ಕ್ಯಾಶಿಯೋ), ಹೆಚ್.ಹನುಮಂತಪ್ಪ(ತಂಬೂರಿ) ಮುಂತಾದವರು ಸಂಗೀತ ನೀಡಿದರು. ಒಂಭತ್ತು ದಿನಗಳವರೆಗೆ ಜರುಗಿದ ದೇವಿಪುರಾಣ ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ದಾನಿಗಳಿಗೂ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.