ದೇವಿರಮ್ಮ ದರ್ಶನಕ್ಕೆ ಹರಿದುಬಂದ ಜನಸಾಗರ

ಚಿಕ್ಕಮಗಳೂರು, ನ. ೪- ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬೆಟ್ಟ ದಲ್ಲಿ ನೆಲಸಿರೋ ದೇವಿರಮ್ಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ.

ರಾಜ್ಯದ ನಾನಾ ಭಾಗದಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಸಮುದ್ರ ಮಟ್ಟದಿಂದ ೩೮೦೦ ಅಡಿ ಎತ್ತರದಲ್ಲಿರೋ ದೇವಿರಮ್ಮ ನೋಡಲು ಈ ದಿನಕ್ಕಾಗಿಯೇ ಭಕ್ತಗಣ ಚಾತಕ ಪಕ್ಷಿಯಂತೆ ಕಾಯುತ್ತ ಇರುತ್ತೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವಿರಮ್ಮ ದರ್ಶನವನ್ನು ಪ್ರತಿವರ್ಷ ಭಕ್ತರು ತಪ್ಪದೇ ಮಾಡ್ತಾರೆ. ದೇವಿ ದರ್ಶನ ಮಾಡಲು ಬರುವ ಭಕ್ತರು ಸುಮಾರು ೮ ಕಿಲೋ ಮೀಟರ್ ದೂರವನ್ನ ನಡೆದೇ ಕ್ರಮಿಸಬೇಕು. ಬೆಟ್ಟ-ಗುಡ್ಡಗಳ ಸಾಲಿನಲ್ಲಿ, ಮಂಜಿನ ನಡುವೆ ಬರಿಗಾಲಿನಲ್ಲಿ ಕಲ್ಲು ಮುಳ್ಳಿನ ದುರ್ಗಮ ಹಾದಿಯಲ್ಲಿ ಹೆಜ್ಜೆಯನ್ನ ಹಾಕಬೇಕು.

ಪ್ರತಿವರ್ಷ ಈ ಕ್ಷೇತ್ರಕ್ಕೆ ರಾಜ್ಯ-ಹೊರರಾಜ್ಯದಿಂದ ಒಂದು ಲಕ್ಷಕ್ಕೂ ಅಧಿಕ ಭಕ್ತರು ಬಂದು ದರ್ಶನ ಮಾಡಿಕೊಂಡು ಪುನೀತರಾಗುತ್ತಾರೆ. ಆದ್ರೆ ಈ ವರ್ಷ ಕೊರೊನಾ ಸೋಂಕು ಕಡಿಮೆಯಾಗಿದ್ರೂ ಮುನ್ನೆಚ್ಚರಿಕೆಯಿಂದ ಜಿಲ್ಲಾಡಳಿತ ಬೆಟ್ಟವೇರಲು ಹೊರಗಡೆಯಿಂದ ಬರುವ ಭಕ್ತರಿಗೆ ನಿರ್ಬಂಧ ಹೇರಿತ್ತು.

ಕೇವಲ ಅಕ್ಕಪಕ್ಕದ ಗ್ರಾಮಸ್ಥರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು, ಆದ್ರೂ ದೇವಿಯ ದರ್ಶನವನ್ನ ಮಾಡಬೇಕೆಂದು ಈ ಬಾರಿ ಸಾವಿರಾರು ಜನರು, ಪೊಲೀಸರ ಕಣ್ತಪ್ಪಿಸಿ ಬೆಟ್ಟವನ್ನೇರಿ ದೇವಿಯ ದರ್ಶನವನ್ನ ಮಾಡಿದ್ದಾರೆ ಎನ್ನಲಾಗಿದೆ. ಕೊರೆಯುವ ಚಳಿಯನ್ನ, ಮೈಮೇಲೆ ಬೀಳೋ ಇಬ್ಬನಿಯನ್ನ, ಜಾರೋ ಗುಡ್ಡವನ್ನೂ ಲೆಕ್ಕಿಸದೇ ಸಾವಿರಾರು ಭಕ್ತರು ದೇವಿಯ ದರ್ಶನ ಮಾಡಿ ಸಂತಸಪಟ್ಟಿದ್ದಾರೆ. ಇನ್ನೂ ಪ್ರತಿವರ್ಷದಂತೆ ಈ ವರ್ಷವೂ ಕೂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ .ಅವರು ಬರಿಗಾಲಲ್ಲಿ ಬೆಟ್ಟವೇರಿ, ದೇವಿ ದರ್ಶನ ಪಡೆದಿದ್ದಾರೆ.