ದೇವಿಗೆ ಯುವಕನ ನರಬಲಿ

ರೇವಾ, ಜು.೧೫- ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಕ್ಷುಲ್ಲಕ ಕಾರಣಗಳಿಗಾಗಿ ವ್ಯಕ್ತಿಯೊಬ್ಬ ದೇವಿಗೆ ನರಬಲಿ ಕೊಟ್ಟಿದ್ದಾನೆ.

ರೇವಾ ಜಿಲ್ಲೆಯ ಬೇಧೋವಾ ಗ್ರಾಮದ ನಿವಾಸಿ ರಾಮ್‌ಲಾಲ್ ಎಂಬಾತ ತನಗೆ ಗಂಡುಮಗು ಆಗಬೇಕೆಂಬ ಇಚ್ಛೆ ಪೂರೈಸಿದ ಹಿನ್ನೆಲೆಯಲ್ಲಿ ದಿವ್ಯಾಂಶು ಎಂಬ ೧೮ ವರ್ಷದ ಯುವಕನನ್ನು ನರ ಬಲಿ ಕೊಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ರಾಮ್‌ಲಾಲ್‌ಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ, ತನಗೆ ಗಂಡುಮಗು ಆಗಬೇಕೆಂದು ಬಯಸುತ್ತಿದ್ದ. ಇದಕ್ಕಾಗಿ ಗ್ರಾಮದ ದೇವಿಯ ಬಳಿ ಹರಕೆ ಹೊತ್ತುಕೊಂಡಿದ್ದ ರಾಮ್‌ಲಾಲ್, ಗಂಡುಮಗುವಾದರೆ ನರಬಲಿ ಕೊಡುವುದಾಗಿ ಹರಕೆ ಹೊತ್ತಿದ್ದನಂತೆ.

ಗರ್ಭಿಣಿಯಾಗಿದ್ದ ಪತ್ನಿ ಇತ್ತೀಚಿಗೆ ಗಂಡುಮಗುವಿಗೆ ಜನ್ಮ ನೀಡಿದ್ದರು. ಅಂತೆಯೇ, ಈತ ದೇವಿಯು ತನ್ನ ಇಚ್ಛೆ ಪೂರೈಸಿದ ಹಿನ್ನೆಲೆಯಲ್ಲಿ ದೇವಿಯನ್ನು ಸಮಾಧಾನಪಡಿಸಲು ನರಬಲಿ ಕೊಡಲು ಜುಲೈ ೬ ರಂದು ದಿವ್ಯಾಂಶು ಎಂಬ ಯುವಕ ಮೇಕೆಗಳನ್ನು ಮೇಯಿಸುತ್ತಿದ್ದಾಗ
ರಾಮ್‌ಲಾಲ್ ಯಾವುದೋ ಸಹಾಯ ಬೇಡುವ ನೆಪದಲ್ಲಿ ದಿವ್ಯಾಂಶ್‌ನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ.
ನಂತರ ಅಲ್ಲಿ ಆ ಯುವಕನನ್ನು, ರಾಮಲಾಲ್ ಕೊಡಲಿಯಿಂದ ಕೊಚ್ಚಿ ಕೊಲೆಮಾಡಿದ್ದಾನೆ. ಅಲ್ಲದೆ, ದೇವಿಯ ವಿಗ್ರಹದ ಕೆಳಗಡೆಯೇ ಶವವನ್ನು ಹೂತುಹಾಕಿಬಂದಿದ್ದಾನೆ. ಆದರೆ ನಂತರ, ದೇವಸ್ಥಾನದಲ್ಲಿ ಮೃತದೇಹ ಕಾಣಿಸಿಕೊಂಡಿದೆ. ಅಂತೆಯೇ ಪೊಲೀಸರು ಶವವನ್ನು ಹೊರತೆಗೆದು ತನಿಖೆ ಆರಂಭಿಸಿದ್ದಾರೆ. ಆಗ ದಿವ್ಯಾಂಶ್ ಕೊನೆಯದಾಗಿ ರಾಮ್‌ಲಾಲ್‌ನೊಂದಿಗೆ ಕಾಣಿಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಹೀಗಾಗಿ ಪೊಲೀಸರು, ರಾಮ್‌ಲಾಲ್‌ನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಮೊದಲಿಗೆ ಹಂತಕ ಪೊಲೀಸರ ದಾರಿತಪ್ಪಿಸಲು ಪ್ರಯತ್ನಿಸಿದ್ದಾನೆ. ನಂತರ ತಾನೇ ಯುವಕನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.