ದೇವಾಲಯ ನಿರ್ಮಾಣಕ್ಕೆ ಗಲಾಟೆ : ಲಿಂಬಾವಳಿ ಭೇಟಿ

ಹೊಸಕೋಟೆ, ಸೆ ೧೭- ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ದೇವಾಲಯ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಅಡ್ಡಿಪಡಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಭೇಟಿ ನೀಡಿ ಮಾತುಕತೆ ನಡೆಸಿದರು.
ಗ್ರಾಮದಲ್ಲಿ ಪುರಾತನ ಕಾಲದ ಆಂಜನೇಯ ಹಾಗೂ ಬಸವೇಶ್ವರ ದೇವಾಲಯ ಪುನರ್ ನಿರ್ಮಾಣ ಮಾಡುವ ವಿಚಾರವಾಗಿ ಗ್ರಾಮದ ಕೆಲವು ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸುತ್ತಿದ್ದಾರೆ ಎಂದು ಕೋಡಿಹಳ್ಳಿ ಗ್ರಾಮದ ಮುಖಂಡ ಹಾಗೂ ಮಾಲೂರು ಮಾಜಿ ಶಾಸಕ ಮಂಜುನಾಥ್‌ಗೌಡ ಅವರು ಬಿಜೆಪಿ ಕಚೇರಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ದೂರು ನೀಡಿದ ಹಿನ್ನೆಲೆ ಗ್ರಾಮಕ್ಕೆ ಆಗಮಿಸಿದ್ದು ಎರಡು ಗುಂಪುಗಳ ಅಭಿಪ್ರಾಯ ಪಡೆದಿದ್ದು, ಯಾವುದೇ ರೀತಿಯ ಘರ್ಷಣೆ ಮಾಡಿಕೊಳ್ಳದೆ ದೇವಾಲಯ ನಿರ್ಮಾಣಕ್ಕೆ ಮುಂದಾಗಿ ಎಂದು ಸಲಹೆ ನೀಡಿದ್ದು, ಎಲ್ಲರೂ ಒಗ್ಗಟ್ಟಾಗಿ ಪರಸ್ಪರ ಮಾತುಕತೆ ನಡೆಸಿ ದೇವಾಲಯ ನಿರ್ಮಿಸುವ ಭರವಸೆ ನೀಡಿದ್ದಾರೆ. ಎಂದರು.
ಕಳೆದ ವಾರ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಸಲುವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇಂದು ದೇವಾಲಯ ವಿಚಾರಕ್ಕೆ ಸಂಬಂದಿಸಿದ ವಿಚಾರಕ್ಕೆ ಸುಮಾರು ೨ ಸಾವಿರ ಜನ ಗ್ರಾಮದಲ್ಲಿ ಜಮಾಯಿಸಿದ್ದರು. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೂ ಪೊಲೀಸರು ನಾಕಾಬಂದಿ ಹಾಕಲಾಗಿತ್ತು. ಸುಮಾರು ೨೫೦ ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ ಡಿ.ಚನ್ನಣ್ಣನವರ್, ಡಿವೈಎಸ್‌ಪಿ ಬಿ.ಎನ್.ಸಕ್ರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.