ದೇವಾಲಯ-ಅಂಗಡಿಗಳಿಂದ ಕಳವು

ಪುತ್ತೂರು, ಜ.೧೩- ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯ ಮಹಾವಿಷ್ಣುಮೂರ್ತಿ ದೇವಾಲಯವು ಸೇರಿದಂತೆ ಸಮೀಪದ ಮೂರು ಅಂಗಡಿಗೆ ಕಳ್ಳರು ನುಗ್ಗಿ ಕಳವು ನಡೆಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಸೋಮವಾರ ತಡರಾತ್ರಿಯ ವೇಳೆ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ.
ದೇವಾಲಯದಲ್ಲಿ ದೇವರ ಬೆಳ್ಳಿಯ ಮಾಲೆ, ಆಭರಣಗಳು, ಗಂಧದ ಕೊರಡುಗಳನ್ನು ಕಳ್ಳರು ಲಪಟಾಯಿಸಿದ್ದು, ಕಾಣಿಕೆ ಹುಂಡಿಯನ್ನು ವಿಫಲ ಯತ್ನ ನಡೆಸಿದ್ದಾರೆ. ದೇವಾಲಯದ ಹಿಂದಿನ ಗೋಪುರದಿಂದ ದೇವಾಲಯದ ಒಳಾಂಗಣಕ್ಕೆ ಪ್ರವೇಶಿಸಿರುವ ಕಳ್ಳರು ಗರ್ಭಗುಡಿಯ ಬಾಗಿಲು ಮುರಿದು ಒಳಪ್ರವೇಶಿಸಿದ್ದಾರೆ.
ಕಳ್ಳರು ದೇವಾಲಯಕ್ಕೆ ನುಗ್ಗಿ ಕಳವು ನಡೆಸಿದ್ದು ಮಾತ್ರವಲ್ಲದೆ, ದೇವಳದ ಒಳಗಡೆಯೇ ಸೀಯಾಳ, ಮದ್ಯ, ಬಾಳೆಹಣ್ಣು ಸೇವಿಸಿ ಅಲ್ಲಲ್ಲಿ ಉಗುಳಿ ಹೋಗಿದ್ದಾರೆ. ಕಳವು ನಡೆಸಿರುವ ಕಳ್ಳರು ದೇವಾಲಯವನ್ನು ಅಪವಿತ್ರಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಅಂಗಡಿಗಳಿಂದ ಕಳವು
ದೇವಾಲಯದ ಮುಂಭಾಗದಲ್ಲಿರುವ ತಿಮ್ಮಪ್ಪ ಗೌಡ ಅವರ ಅಂಗಡಿಗೆ ನುಗ್ಗಿದ ಕಳ್ಳರು ರೂ. ೩೦ ಸಾವಿರ ನಗದು ಹಣವನ್ನು ಕಳವು ಗೈದಿದ್ದಾರೆ. ಈ ಮೊತ್ತವು ಸ್ವಸಹಾಯ ಸಂಘದ ಸಂಗ್ರಹದ ಮೊತ್ತ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ದೇವಾಲಯದ ಬಳಿಯಿಂದ ಕೆಮ್ಮಾಯಿ ದ್ವಾರದ ಬಳಿ ಇರುವ ಲಿಂಗಪ್ಪ ಮತ್ತು ಜಾನ್ ಫೆರ್ನಾಂಡಿಸ್ ಅವರ ಅಂಗಡಿಗೂ ನುಗ್ಗಿ ಚಿಲ್ಲರೆ ಹಣ ಎಗರಿಸಿದ್ದಾರೆ. ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖಾ ಕ್ರಮಗಳನ್ನು ಕೈಗೊಂಡಿದ್ದಾರೆ.