ದೇವಾಲಯದ ಹುಂಡಿಗೆ ಕನ್ನ ಹಾಕುವುದು ಬಿಡಲಿ: ವಿಜಯೇಂದ್ರ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.23:- ರಾಜ್ಯ ಸರ್ಕಾರ ದೇವಾಲಯಗಳಿಗೆ ಕನ್ನ ಹಾಕುವುದರ ಬದಲಾಗಿ ವಿಧಾನಸೌಧ ಮುಂದೆ ಹುಂಡಿ ಇರಿಸಿದರೆ ದಾನಿಗಳು ಅಲ್ಲೇ ದಾನ ಮಾಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಳಿ ಹಣವಿಲ್ಲದಂತಾಗಿದ್ದು, ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ. ಈ ಕಾರಣದಿಂದಾಗಿ ದೇವಾಲಯಗಳ ಹುಂಡಿಯಲ್ಲಿನ ಶೇ.10 ಹಣವನ್ನು ಸರ್ಕಾರ ಬಳಸಿಕೊಳ್ಳಲು ತೀರ್ಮಾನಿಸಿದೆ. ಈ ರೀತಿ ದೇವಾಲಯಗಳ ಹುಂಡಿಗೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಹುಂಡಿ ಇಟ್ಟರೆ, ದಾನಿಗಳು ಅಲ್ಲಿಗೆ ಬಂದು ದಾನ ಮಾಡುತ್ತಾರೆ ಎಂದು ಟೀಕಿಸಿದ ಅವರು, ಸರ್ಕಾರ ರಾಜ್ಯದಲ್ಲಿರುವ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಒಂದು ರೂಪಾಯಿ ಅನುದಾನ ಕೊಡುತ್ತಿಲ್ಲ. ರಾಜ್ಯದ ಹಣೆಬರಹ ಏನಾಗುತ್ತಿದೆ ಎಂಬುದನ್ನು ಜನರೇ ನೋಡುತ್ತಿದ್ದಾರೆ ಎಂದರು.
ದೆಹಲಿ ಚಲೋ ನಾಟಕ:
ರಾಜ್ಯ ಸರ್ಕಾರದ ಪ್ರಕಾತ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲ, ಸಿಎಂ ಕೂಡ ಬರ ಪರಿಸ್ಥಿತಿ ಇಲ್ಲವೆಂಬ ಭ್ರಮೆಯಲ್ಲಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆ ವಿಚಾರದಲ್ಲಿ ಆತಂಕದಲ್ಲಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಸಲುವಾಗಿ ದೆಹಲಿ ಚಲೋ ನಾಟಕವಾಡಿ ವ್ಯರ್ಥ ಪ್ರಯತ್ನ ಮಾಡಿದೆ ಎಂದು ವಾಗ್ದಾಳಿ ನಡೆಸಿದ ಅವರು, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ ಎಂಬ ಸರ್ಕಾರದ ಅಜೆಂಡಾ ಏನೆಂಬುದು ಈ ಆದೇಶಗಳಿಂದ ಗೊತ್ತಾಗುತ್ತಿದೆ. ಈ ಸರ್ಕಾರ ಕನ್ನಡ ವಿರೋಧಿ ಚಿಂತನೆಯಲ್ಲಿದ್ದು, ಕನ್ನಡ ನಾಡು-ನುಡಿಗೆ ಮುಖ್ಯಮಂತ್ರಿಗಳು ಧಕ್ಕೆ ತರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹೈಕಮಾಂಡ್ ಭೇಟಿ ಮಾಡುವೆ:
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಜೆಡಿಎಸ್ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆಯಲ್ಲಿ ಯಾವ ಗೊಂದಲವಿಲ್ಲ ಹಾಗೂ ಮುಂದೆಯೂ ಉದ್ಭವ ಆಗುವುದಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಅಮಿತ್ ಶಾ ಅವರನ್ನು ಏಕೆ ಭೇಟಿ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ನಾನು ಮುಂದಿನ ತಿಂಗಳ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ ಎಂದ ಅವರು, ಬಿಜೆಪಿಯಿಂದ ಕೆಲವರನ್ನು ಕಾಂಗ್ರೆಸ್‍ಗೆ ಸೆಳೆಯುವ ವಿಚಾರ ನನಗೆ ಗೊತ್ತಿಲ್ಲ, ಈ ರೀತಿಯ ಊಹಾಪೆÇೀಹಗಳಿಗೆ ಉತ್ತರಿಸಲ್ಲ ಎಂದರು.
ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಲ್ಲ. ಈ ಹಿಂದೆ ನಂಜನಗೂಡು ಉಪ ಚುನಾವಣೆ ನಡೆದಾಗ ಸಿದ್ದರಾಮಯ್ಯ ಅವರ ಸರ್ಕಾರವೇ ಇತ್ತು. ಬಳಿಕ ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಹೇಗೆ ಸೋತಿದೆ ಎಂಬುದು ಜನರಿಗೆ ಗೊತ್ತಿದೆ. ಅಲ್ಲದೇ ಸರ್ಕಾರ ಇದ್ದಾಗ ಉಪ ಚುನಾವಣೆಗಳು ಹೇಗೆ ನಡೆಯುತ್ತೆ ಎಂಬುದೂ ಜನರಿಗೆ ಗೊತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಸಾದ್ ನಿವಾಸಕ್ಕೆ ಭೇಟಿ:
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕಾಗಮಿಸಿದ್ದ ಬಿ.ವೈ. ವಿಜಯೇಂದ್ರ ಗುರುವಾರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿದರು. ನಗರದ ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ತೆರಳಿದ ಅವರು, ಸಂಸದರ ಯೋಗಕ್ಷೇಮ ವಿಚಾರಿಸಿದರಲ್ಲದೆ, ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ 2024ರ ಲೋಕಸಭಾ ಚುನಾವಣೆ ವಿಚಾರವಾಗಿಯೂ ಚರ್ಚೆ ನಡೆಸಿದರು.