ದೇವಾಲಯದಲ್ಲಿ ಒಂದೇ ಸಲ ಹೆಚ್ಚು ಜನಕ್ಕೆ ಅವಕಾಶ ಬೇಡ-ಡಿಸಿ

ಚಿಕ್ಕಬಳ್ಳಾಪುರ ನ.೧೦:ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಹಾಗೂ ನೂರಾರು ವರ್ಷಗಳ ಇತಿಹಾಸವಿರುವ ಪುರಾಣ ಪ್ರಸಿದ್ಧ ಭೋಗನಂದೀಶ್ವರ ದೇವಾಲಯಕ್ಕೆ ಕಾರ್ತಿಕ ಮಾಸದಲ್ಲಿ ಭೇಟಿ ನೀಡುವ ಭಕ್ತಾದಿಗಳು ದೇವಾಲಯದ ಒಳಾಂಗಣದಲ್ಲಿ ೩೦೦ ಕ್ಕಿಂತಲೂ ಹೆಚ್ಚು ಜನ ನಿಲ್ಲದಂತೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಕಾರ್ತಿಕ ಮಾಸದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಪುರಾತನ ಐತಿಹಾಸ ಪ್ರಸಿದ್ಧ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಶಿವ ಪಾರ್ವತಿ, ಗಿರಿಜಾಂಭ, ಅರುಣಾಚಲೇಶ್ವರ ಸೇರಿದಂತೆ ಪ್ರಮುಖ ದೇವರುಗಳ ಪೂಜೆಯನ್ನು ವಿಶೇಷವಾಗಿ ನೆರವೇರಿಸಲಾಗುತ್ತದೆ. ಆದರೆ, ಪ್ರಸ್ತುತ ದಿನಗಳಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡಿರುವುದರಿಂದ ಇದರ ಮೇಲೆ ನಿಯಂತ್ರಣವೇರಲು ಜನದಟ್ಟಣೆಯನ್ನು ತಡೆಯುವುದು ಅವಶ್ಯಕವಾಗಿದೆ ಎಂದರು.
ಕಾರ್ತಿಕ ಮಾಸದಲ್ಲಿ ವಿವಿಧ ಪ್ರದೇಶಗಳಿಂದ ಭೋಗನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ಭಕ್ತಾದಿಗಳು ಸಲ್ಲಿಸುವ ಪ್ರತೀತಿ ನಡೆದುಕೊಂಡು ಬಂದಿದೆ. ಬೆಂಗಳೂರಿಗೆ ಸಮೀಪದಲ್ಲಿರುವ ಶಿವನ ದೇವಸ್ಥಾನ ಎನ್ನುವ ಕಾರಣಕ್ಕೆ ಪ್ರತಿದಿನ ಸಾವಿರಾರು ಜನ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಗಡಿ ಜಿಲ್ಲೆಯಯಾಗಿರುವುದರಿಂದ ನೆರೆ ರಾಜ್ಯದಿಂದಲೂ ಭಕ್ತಾದಿಗಳು ಇಲ್ಲಿಯ ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಅದರಲ್ಲೂ ಕಾರ್ತಿಕ ಮಾಸದ ಸೋಮವಾರ ದಿನವಂತೂ ೫೦೦೦ಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದಾಗಿ ದೇವಾಲಯದ ಒಳಾಂಗಣದಲ್ಲಿ ೩೦೦ಕ್ಕಿಂತಲೂ ಹೆಚ್ಚು ಜನ ನಿಲ್ಲದಂತೆ ಕ್ರಮವಹಿಸಿದೆ. ಜನಸಂಖ್ಯೆ ದಟ್ಟಣೆಯಾದಷ್ಟು ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಹಿರಿಯರು ಮತ್ತು ಮಕ್ಕಳನ್ನು ದೇವಾಲಯಕ್ಕೆ ಕರೆತರದೇ ಇರುವುದೇ ಒಳ್ಳೆಯದು ಎಂದು ಅವರು ಜಿಲ್ಲಾಡಳಿತ ಕೈಗೊಂಡಿರುವ ಈ ಕ್ರಮಕ್ಕೆ ಪ್ರತಿಯೊಬ್ಬರು ಸಹಕರಿಸಿ ಹಾಗೂ ಕೊರೊನಾ ವೈರಸ್ ತಡೆಗೆ ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಮರೇಶ್ ಸೇರಿದಂತೆ ಮುಂತಾದವರು ಇದ್ದರು.