ದೇವಾಲಯಗಳ ಅಭಿವೃದ್ಧಿಗೆ ಧರ್ಮಸ್ಥಳ ಯೋಜನೆಯಿಂದ ಅಪಾರ ಕೊಡುಗೆ

ಕೆ.ಆರ್.ಪೇಟೆ:ಏ:27: ದೇಗುಲಗಳು ನಮ್ಮ ಪಾರಂಪರಿಕ ಕಾಲದ ಇತಿಹಾಸದ ಪ್ರತೀಕಗಳಾಗಿದ್ದು ಇವುಗಳನ್ನು ಪುನರುಜ್ಜೀವನ ಹಾಗೂ ಅಭಿವೃದ್ದಿ ಗೊಳಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ ತಿಳಿಸಿದರು.
ಅವರು ತಾಲ್ಲೂಕಿನ ಬೆಡದಹಳ್ಳಿಯಲ್ಲಿ ಸ್ಥಾಪಿತವಾಗಿರುವ ಶ್ರೀ ಪಂಚಭೂತೇಶ್ವರ ಶ್ರೀಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ದೇವಾಲಯದ ಅಭಿವೃದ್ದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೆಂದ್ರ ಹೆಗ್ಗಡೆಯವರು ಎರಡು ಲಕ್ಷ ರೂಪಾಯಿಗಳ ಹಣವನ್ನು ಮಂಜೂರು ಮಾಡಿದ್ದು ಅದರ ಆದೇಶದ ಪ್ರತಿಯನ್ನು ಶ್ರೀಮಠದ ಸ್ವಾಮೀಜಿಗಳಿಗೆ ವಿತರಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ಜನರ ಬದುಕು ಹಸನಾಗಲು ಹತ್ತು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಅಲ್ಲದೇ ಪ್ರತೀ ವರ್ಷ ತಾಲ್ಲೂಕಿಗೆ ಒಂದು ಕೆರೆ ಅಭಿವೃದ್ದಿ ಮಾಡುವ ಮೂಲಕ ಅಂತರ್ಜಲ ಅಭಿವೃದ್ದಿಗೆ ಸಹಕಾರ ನೀಡುತ್ತಿದ್ದಾರೆ.
ತಾಲ್ಲೂಕಿನ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಾಣಕ್ಕೆ ಹಣಸಹಾಯ ಮಾಡುತ್ತಿದ್ದಾರೆ. ದೇವಾಲಯಗಳ ಅಭಿವೃದ್ದಿಗೆ ನೆರವು ನೀಡುತ್ತಿದ್ದು ಉತ್ತಮ ಸಮಾಜದ ನಿರ್ಮಾಣ ಕಾರ್ಯದಲ್ಲಿ ಹಗಲಿರುಳು ಶ್ರಮವಹಿಸಿ ಒಂದು ಸರ್ಕಾರ ಮಾಡಬಹುದಾದ ಕೆಲಸಗಳನ್ನು ಶ್ರೀಕ್ಷೇತ್ರ ಮಾಡುತ್ತಿದೆ ಎಂದು ತಿಳಿಸಿದರು.
ಯೋಜನಾಧಿಕಾರಿ ಮಮತಾಶೆಟ್ಟಿ, ಉದ್ಯಮಿ ಕೆ.ಎಸ್.ರಾಜೇಶ್, ಬೆಡದಹಳ್ಳಿ ಶ್ರೀಕ್ಷೇತ್ರದ ಹಲವರು ಹಾಜರಿದ್ದರು.