ದೇವಾಲಯಗಳು ಸಂಸ್ಕøತಿಯ ಪ್ರತಿಬಿಂಬ

ಕೃಷ್ಣರಾಜಪೇಟೆ:ಏ:20: ನಮ್ಮ ನೆಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ದೇವಾಲಯಗಳು ನಮ್ಮ ಸಂಸ್ಕøತಿಯ ಪ್ರತಿಬಿಂಬವಾಗಿವೆ. ಶರಣ ಶ್ರದ್ಧಾ ಕೇಂದ್ರವಾಗಿರುವ ದೇವಾಲಯಗಳ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದೆ ಎಂದು ರಾಜ್ಯದ ಯುವಜನ ಸೇವೆ, ಕ್ರೀಡೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಹೇಳಿದರು.
ಅವರು ತಮ್ಮ ಹುಟ್ಟೂರು ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೈಗೋನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರ ಮಾಡುತ್ತಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯವನ್ನು ನೆರವೇರಿಸಿ ಗ್ರಾಮಸ್ಥರು ಹಾಗೂ ಆಸ್ಥಿಕ ಬಂಧುಗಳನ್ನು ಉದ್ಧೇಶಿಸಿ ಮಾತನಾಡಿದರು.
ನಾನು ಬಾಲ್ಯದಲ್ಲಿ ಸಂಕಷ್ಠದಲ್ಲಿದ್ದ ಸಮಯದಲ್ಲಿ ನಾನು ಕೇಳಿದ್ದನ್ನೆಲ್ಲಾ ನೀಡಿ ನಮ್ಮ ಗ್ರಾಮ ರಕ್ಷಕನಾದ ಶ್ರೀ ವೀರಭದ್ರೇಶ್ವರಸ್ವಾಮಿಯು ಈಡೇರಿಸಿ ಹರಸಿ ಆಶೀರ್ವಧಿಸಿದ್ದಾನೆ.
ಸಮಾಜ ಸೇವಕನಾಗಿ ಉಧ್ಯಮಿಯಾಗಿದ್ದ ನಾನು ರಾಜಕಾರಣ ಕ್ಷೇತ್ರಕ್ಕೆ ಬಂದು 3 ಭಾರಿ ಶಾಸಕನಾಗಿ ಪ್ರಸ್ತುತ ಸಚಿವನಾಗಿ ಕೆಲಸ ಮಾಡಲು ಸ್ವಾಮಿಯ ಆಶೀರ್ವಾದದ ಬಲವೇ ಮುಖ್ಯ ಕಾರಣವಾಗಿದೆ. ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸವನ್ನು ಹೊಂದಿರುವ ವೀರಭದ್ರೇಶ್ವರಸ್ವಾಮಿಯ ದೇವಾಲಯವು ಶಿಥಿಲ ವಾಗಿದ್ದು ಕಿರಿದಾಗಿದ್ದರಿಂದಾಗಿ ಗ್ರಾಮಸ್ಥರು ಹಾಗೂ ಮುಂಬೈ ಮಹಾನಗರದಲ್ಲಿ ಸೇವಾ ಸಮಿತಿಯನ್ನು ರಚಿಸಿಕೊಂಡು ಫಂಡ್ ಸಂಗ್ರಹಣೆ ಮಾಡಿದ್ದ ಬಂಧುಗಳೆಲ್ಲರೂ ಸೇರಿಕೊಂಡು ದೇವಸ್ಥಾನವನ್ನು ವಾಸ್ತುಬದ್ಧವಾಗಿ ಪುನರ್ ನಿರ್ಮಾಣ ಮಾಡಲು ನಿರ್ಧಾರ ಮಾಡಿ ಇಂದು ಭೂಮಿ ಪೂಜೆಯನ್ನು ಅಧಿಕೃತವಾಗಿ ಮಾಡಿಸಿ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಕೈಗೋನಹಳ್ಳಿ ಗ್ರಾಮ ರಕ್ಷಕನಾದ ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಾಲಯವು ವಾಸ್ತುಬದ್ಧವಾಗಿ ಸುಂದರವಾಗಿ ಇನ್ನಾರು ತಿಂಗಳ ಒಳಗಾಗಿ ನಿರ್ಮಾಣವಾಗಬೇಕು ಎಂದು ದೇವಾಲಯದ ಸ್ಥಪತಿಗಳಾದ ತಮಿಳುನಾಡಿನ ಸತ್ಯರಾಜಪಿಳ್ಳೈ ಅವರಲ್ಲಿ ಸಚಿವರು ಮನವಿ ಮಾಡಿದರು.
ಇಂದಿನ ದಿನಮಾನದಲ್ಲಿ ಸದಾ ಒತ್ತಡಗಳಲ್ಲಿಯೇ ದಿನವನ್ನು ಕಳೆಯುವ ನಾವು ಒತ್ತಡಗಳು ಹಾಗೂ ಮಾನಸಿಕ ಕಿರಿಕಿರಿಯಿಂದ ಮುಕ್ತರಾಗಿ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯಲು ದೇವರು ಮತ್ತು ಧರ್ಮದ ಮಾರ್ಗದಲ್ಲಿ ಆಗುವುದು ಅಗತ್ಯವಾಗಿದೆ.
ದೇವಾಲಯಗಳಿಗೆ ತೆರಳಿ ಭಗವಂತನ ಮುಂದೆ ನಿಂತು ನಮ್ಮ ಮನಸ್ಸಿನ ನೋವನ್ನು ನಿವೇಧನೆ ಮಾಡಿಕೊಂಡಾಗ ಮನಸ್ಸಿಗೆ ಶಾಂತಿ ದೊರೆಯುವ ಜೊತೆಗೆ ದಯಾಮಯನಾದ ಭಗವಂತನ ಆಶೀರ್ವಾಧವೂ ನಮಗೆ ದೊರೆಯಲಿದೆ. ಆದ್ದರಿಂದ ದಿನದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಅರ್ಧ ಗಂಟೆಯ ಕಾಲ ದೇವಾಲಯಗಳಿಗೆ ಹೋಗಿ ಬರುವುದನ್ನು ರೂಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಸಚಿವ ನಾರಾಯಣಗೌಡ ಇಂದಿನ ಪಾಶ್ಚಿಮಾತ್ಯಶೈಲಿಯ ಭ್ರಮಾಲೋದಿಂದ ನಮ್ಮ ಮಕ್ಕಳನ್ನು ಹೊರಗೆ ಕರೆತಂದು ನಮ್ಮ ಸನಾತನವಾದ ಹಿಂದೂ ಧರ್ಮದ ಬಗ್ಗೆ ತಿಳಿಸಿಕೊಟ್ಟು ಆಧ್ಯಾತ್ಮದ ಹಾದಿಯಲ್ಲಿ ನಮ್ಮ ಮಕ್ಕಳನ್ನು ಮುನ್ನಡೆಸುವುದು ಇಂದಿನ ಅಗತ್ಯವಾಗಿದೆ. ಯೋಗ, ಧ್ಯಾನ ಮತ್ತು ಆಧ್ಯಾತ್ಮದಿಂದ ಆರೋಗ್ಯ ಸಂವರ್ಧನೆಯಾಗುವ ಜೊತೆಗೆ ನಾವು ಕೈಹಿಡಿದ ಕೆಲಸಗಳು ಯಶಸ್ವಿಯಾಗಿ ನೆಮ್ಮದಿಯೂ ದೊರೆಯುತ್ತದೆ. ನಾವು ಸಾಧನೆ ಮಾಡಲು ಕಷ್ಠವಾದರೂ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಹಾದಿಯಲ್ಲಿಯೇ ಸಾಗಿ ಗುರಿಯನ್ನು ಮುಟ್ಟುವ ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.
ಭೂಮಿಪೂಜಾ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡರ ಧರ್ಮಪತ್ನಿ ದೇವಕಿನಾರಾ ಯಣಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ನಂಜಪ್ಪ, ಆನಂದ, ಮನ್‍ಮುಲ್ ನಿರ್ದೇಶಕ ಡಾಲುರವಿ, ಗ್ರಾಮದ ಮುಖಂಡರಾದ ಕೆ.ಸಿ. ಮಂಜಪ್ಪ, ಕೆ.ಎಸ್.ಮುದ್ದೇಗೌಡ, ಕೈಗೋನಹಳ್ಳಿ ಕುಮಾರ್, ಸಾರಂಗಿ ಮಂಜುನಾಥಗೌಡ, ಈರಪ್ಪ, ವೇದಬ್ರಹ್ಮ ಹರೀಶಭಟ್ಟ ಸೇರಿದಂತೆ ಸಾರಂಗಿ ಗ್ರಾಮ ಪಂಚಾಯಿತಿ ಪಿಡಿಓ ಯೋಗೇಶ್, ದೇವಾಲಯ ನಿರ್ಮಾಣ ಸಮಿತಿಯ ಖಜಾಂಚಿ ನಂಜೇಗೌಡ, ಸಚಿವ ನಾರಾಯಣಗೌಡರ ಹಿರಿಯ ಸಹೋದರ ರಾಮಚಂದ್ರೇಗೌಡ ಸೇರಿದಂತೆ ವೀರಭದ್ರೇಶ್ವರ ದೇವರ ಕುಲದ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.