ದೇವಾಲಗಳು ಅಭಿವೃದ್ಧಿಗೆ ಸಹಕಾರ ನೀಡುವೆ

ಕೋಲಾರ,ಅ,೧೭:ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರ ಹೊಂದಿರುವ ತಾಲೂಕಿನ ಸೀತಿಯ ಶ್ರೀ ಪತ್ತೇಶ್ವರ ಸ್ವಾಮಿ ಮತ್ತು ಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ನಿತ್ಯ ಭಕ್ತಾದಿಗಳಿಗೆ ಅನ್ನದಾಸೋಹ ಕಾರ್ಯಕ್ರಮಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಈ ದೇವಾಲಯಕ್ಕೆ ಮೂಲೆ ಮೂಲೆಗಳಿಂದ ಮತ್ತು ಬೆಂಗಳೂರಿನಲ್ಲಿ ಹೆಚ್ಚಿನ ಭಕ್ತಾದಿಗಳು ಇದ್ದು ಪ್ರತಿದಿನವೂ ಭಕ್ತಾದಿಗಳು ಬಂದು ದರ್ಶನ ಪಡೆಯುತ್ತಾರೆ. ಕೆಲವು ಭಕ್ತಾದಿಗಳು ಭಕ್ತಿಯಿಂದ ತಮ್ಮ ಸ್ವಂತ ಹಣದಿಂದ ಆರ್ಥಿಕ ಸಹಾಯದ ಹಸ್ತ ನೀಡುತ್ತಿದ್ದಾರೆ. ಈ ರೀತಿ ಸಾರ್ವಜನಿಕರು ಗ್ರಾಮದಲ್ಲಿರುವ ಒಂದು ದೇವಾಲಯಕ್ಕೆ ಮತ್ತು ಶಾಲೆಗೆ ಕೈ ಜೋಡಿಸುವುದರಿಂದ ಗ್ರಾಮದಲ್ಲಿ ಶಾಂತಿ ಮತ್ತು ಯುವಕರಿಗೆ ಶಿಕ್ಷಣ ನೀಡಿದಂತಾಗುತ್ತದೆ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಈ ದೇವಾಲಯ ಅಭಿವೃದ್ಧಿ ಹೊಂದುವುದಕ್ಕೆ ಎಲ್ಲಾ ರೀತಿಯ ಸಹಕಾರ ಮತ್ತು ಸಹಾಯ ನೀಡುತ್ತೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಶ್ರೀ ಭೈರವೇಶ್ವರ ಸ್ವಾಮಿ ಟ್ರಸ್ಟ್‌ನ ಅಧ್ಯಕ್ಷ ನೂತನ ಅಧ್ಯಕ್ಷ ಚಂಜಿಮಲೆ ವಿ.ಮುನೇಗೌಡ ಮಾತನಾಡಿ, ಸುಮಾರು ವರ್ಷದಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳು ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದರು. ಇದನ್ನು ಮನಗಂಡು ನಾನು ಅಧ್ಯಕ್ಷನಾದ ಮೇಲೆ ಭಕ್ತಾದಿಗಳ ನೆರವಿನಿಂದ ಇಂದಿನಿಂದ ದಿನನಿತ್ಯ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದರು.
ಮುಜರಾಯಿ ಇಲಾಖೆ ಅಧಿಕಾರಿಗಳಾದ ಸುಜಾತ, ಹರ್ಷವರ್ಧನ್, ಶ್ರೀ ಭೈರವೇಶ್ವರ ಟ್ರಸ್ಟ್ ಪದಾಧಿಕಾರಿಗಳಾದ ಚೌಡಪ್ಪ, ಬಾಲಕೃಷ್ಣ, ಮುನೇಗೌಡ, ವೆಂಕಟೇಶ್, ಲಕ್ಷ್ಮಣ್ ಗೌಡ, ಉಷಾರಾಣಿ ಇದ್ದರು.