ದೇವಾನಂದ್ ಆತ್ಮಹತ್ಯೆ ಪ್ರಕರಣ: ಉದ್ರಿಕ್ತ ಕೋಲಿ ಸಮಾಜದ ಪ್ರತಿಭಟನೆಕಾರರಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ರಸ್ತೆ ತಡೆ: ಲಘು ಲಾಠಿ ಪ್ರಹಾರ ಹೋರಾಟಗಾರರ ಬಂಧನ

ಕಲಬುರಗಿ,ಸೆ.30: ಜಿಲ್ಲೆಯ ಚಿತ್ತಾಪುರ ಮತಕ್ಷೇತ್ರದ ಕಲಗುರ್ತಿ ಗ್ರಾಮದಲ್ಲಿ ಹಿಂದುಳಿದ ವರ್ಗ ಕಬ್ಬಲಿಗ ಸಮಾಜದ ದೇವಾನಂದ್ ರಾಮಚಂದ್ರ ಕೊರಬಾ (23) ಎಂಬ ಯುವಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಾಡಬೂಳ್ ಠಾಣೆಯ ಪೋಲಿಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಹಾಗೂ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಹಾಗೂ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿ ಕೋಲಿ ಸಮಾಜದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ಆರಂಭಿಸಿದ್ದು, ಇಲ್ಲಿಯವರೆಗೂ ಯಾರೂ ಸಹ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕುಪಿತಗೊಂಡ ಹೋರಾಟಗಾರರು ಶನಿವಾರ ದಿಢೀರನೇ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಮುಖ್ಯ ದ್ವಾರಗಳನ್ನು ಬಂದ್ ಮಾಡಿ, ಮುಖ್ಯ ರಸ್ತೆ ಮೇಲೆ ಕುಳಿತು ಧರಣಿ ಆರಂಭಿಸಿದರು.
ಕೋಲಿ ಸಮಾಜದ ಮುಖಂಡ ಅವ್ವಣ್ಣ ಮ್ಯಾಕೇರಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಸವರಾಜ್ ಸಪ್ಪಣಗೋಳ್, ಶರಣಪ್ಪ ತಳವಾರ್, ತಿಪ್ಪಣ್ಣರೆಡ್ಡಿ, ತಮ್ಮಣ್ಣ ಡಿಗ್ಗಿ, ಗುಂಡು ಇನಾಪೂರ್, ಬಸವರಾಜ್ ಹರವಾಳ್, ಸಂತೋಷ್ ತಳವಾರ್, ಹುಲಿಗೆಪ್ಪ ಕನಕಗಿರಿ, ಅಂಬು ಡಿಗ್ಗಿ, ಸಿದ್ದು ಬಾನರ್, ಸಂತೋಷ್ ಬೆಣ್ಣೂರ್, ನಿಂಗಣ್ಣ ದೇವಣಗಾಂವ್, ಮಹಾರಾಯ್ ಅಗಸಿ, ಸೈಬಣ್ಣ ಜಾಲಗಾರ್, ದಶರಥ್ ದೊಡ್ಡಮನಿ, ಲಕ್ಷ್ಮಣ್ ಅವಟೆ, ರೇವಣಸಿದ್ದ ಕಾಮನಮನಿ, ಬಸವರಾಜ್ ಸುರಪುರ, ಆನಂದ್, ಚಂದ್ರಕಾಂತ್ ಶಾಖಾಪೂರ್, ಸೂರ್ಯಕಾಂತ್ ವಾರದ್, ಶರಣಪ್ಪ ಆಳಂದ್, ಪಿತಂಬರ್ ಕಲಗುರ್ತಿ, ಮಲ್ಲಿಕಾರ್ಜುನ್ ನಾಟೀಕಾರ್, ಯಲ್ಲಪ್ಪ ಹೊಸಮನಿ, ಸಿದ್ದು ಫರ್ತಾಬಾದ್, ಶಿವು ಪ್ಯಾಟಿ, ಬಬ್ರುವಾಹನ್ ಹಾವನೂರ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಬಂದ ಸಮಾಜದ ನೂರಾರು ಕಾರ್ಯಕರ್ತರು ಪಾಲ್ಗೊಂಡು, ಎಲ್ಲಿಯವರೆಗೆ ಹೋರಾಟ, ಗೆಲ್ಲುವವರೆಗೆ ಹೋರಾಟ ಎಂಬ ಘೋಷಣೆಗಳನ್ನು ಕೂಗಿದರು.
ಸ್ಥಳದಲ್ಲಿ ಒಂದು ರೀತಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ನಗರ ಪೋಲಿಸ್ ಆಯುಕ್ತ ಚೇತನ್ ಆರ್., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಅಡ್ಡೂರು ಶ್ರೀನಿವಾಸಲು ಸೇರಿದಂತೆ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಧಾವಿಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಅದೇ ರೀತಿ ಸೂಪರ್ ಮಾರ್ಕೆಟ್‍ನಲ್ಲಿಯೂ ಸಹ ಹಲವಾರು ಕಾರ್ಯಕರ್ತರು ರಸ್ತೆ ಮೇಲೆ ಪ್ರತಿಭಟನೆ ಮಾಡಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತುರನ್ನುಮ್ ಅವರು ಭೇಟಿ ನೀಡಿದರು. ಆಗ ಹೋರಾಟದ ನೇತೃತ್ವ ವಹಿಸಿದ್ದ ಅವ್ವಣ್ಣ ಮ್ಯಾಕೇರಿ ಅವರು ಮಾತನಾಡಿ, ಕಲಗುರ್ತಿ ಗ್ರಾಮದಲ್ಲಿ ಕಳೆದ ಜುಲೈ 15ರಂದು ಕಬ್ಬಲಿಗ ಸಮಾಜದ 16 ವರ್ಷ ವಯಸ್ಸಿನ ಬಾಲಕಿಯನ್ನು ಅದೇ ಗ್ರಾಮದ ಯುವಕನೋರ್ವ ಅಪಹರಿಸಿಕೊಂಡು ಹೋಗಿದ್ದ. ಆ ಕುರಿತು ಬಾಲಕಿಯ ತಂದೆ ತನ್ನ ಪುತ್ರಿಯ ಅಪಹರಣವಾಗಿದ್ದು, ಪತ್ತೆ ಹಚ್ಚುವಂತೆ ಮಾಡಬೂಳ್ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದರು. ಮರುದಿನ ಜುಲೈ 16ರಂದು ಪೋಲಿಸರು ಪ್ರಕರಣ ದಾಖಲಾಗಿತ್ತು. ಬಾಲಕಿಯನ್ನು ಅಪಹರಿಸಿದ್ದ ಯುವಕ ಕಳೆದ ಜುಲೈ 14ರಂದು ತನ್ನ ಕಾರನ್ನು ಗ್ರಾಮದ ದೇವಾನಂದ್ ಕೊರಬಾ ಅವರ ಮನೆಯ ಹತ್ತಿರ ನಿಲ್ಲಿಸಿದ್ದ. ಜುಲೈ 15ರಂದು ಬೆಳಿಗ್ಗೆ ಕಾರು ತೆಗೆದುಕೊಂಡು ಹೋಗಿದ್ದ. ಅಂದೇ ಅಪ್ರಾಪ್ತ ಬಾಲಕಿಯೊಂದಿಗೆ ಯುವಕ ನಾಪತ್ತಯಾಗಿದ್ದ. ಈ ವಿಷಯ ತಿಳಿದ ದೇವಾನಂದ್ ತನ್ನ ಮನೆಯ ಹತ್ತಿರ ಕಾರು ಏಕೆ ನಿಲ್ಲಿಸಿದ್ದು ಎಂದು ಮೊಬೈಲ್‍ನಲ್ಲಿ ಸಿಟ್ಟು ಮಾಡಿದ್ದ. ಆಗ ಇಬ್ಬರ ನಡುವೆ ವಾದ, ವಿವಾದ ನಡೆದಿತ್ತು ಎಂದು ತಿಳಿಸಿದರು.
ಜುಲೈ 17ರಂದು ಅದೇ ಗ್ರಾಮದ ಕಾಂಗ್ರೆಸ್ ಮುಖಂಡ ಶಿವರಾಜ್ ಅಣ್ಣಾರಾವ್ ಪಾಟೀಲ್, ಸಿದ್ದಣ್ಣಗೌಡ ಅಣ್ಣಾರಾವ್ ಪಾಟೀಲ್ ಅವರು ದೇವಾನಂದನ ಮನೆಗೆ ಬಂದು, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದ ಯುವಕನ ಪರವಾಗಿ ಕಾರು ನಿಲ್ಲಿಸಿದ್ದ ವಿಷಯಕ್ಕೆ ಜಗಳ ತೆಗೆದು, ನಿಮ್ಮ ಮನೆಯ ಹತ್ತಿರ ಕಾರು ನಿಲ್ಲಿಸಿದರೆ ಏನಾಯಿತು? ಎಂದು ಅವಾಚ್ಯವಾಗಿ ಬೈದರು. ಅಷ್ಟೇ ಅಲ್ಲದೇ ದೇವಾನಂದನಿಗೆ ಹೊಡೆದರು. ಅಣ್ಣ, ತಮ್ಮಂದಿರರಿಗೆ, ತಾಯಿ, ತಂದೆಗೆ ಎಲ್ಲರಿಗೂ ಜೈಲಿಗೆ ಕಳಿಸುತ್ತೇವೆ. ನಿಮ್ಮನ್ನು ಬೆತ್ತಲೆ ಮಾಡಿ ಊರಲ್ಲಿ ಮೆರವಣಿಗೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಪೋಲಿಸರಿಂದ ನಿಮಗೆ ಮಾಡಿಸುತ್ತೇವೆ ಎಂದು ಭಯ ಹುಟ್ಟಿಸಿದ್ದರು ಎಂದು ಕುಟುಂಬಸ್ಥರ ಹೇಳಿಕೆಗಳನ್ನು ಅವರು ಉಲ್ಲೇಖಿಸಿದರು.
ತನ್ನ ಸಹೋದರ ದೇವಾನಂದ್ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಗ್ರಾಮದ ಸಿದ್ದು ಅಲಿಯಾಸ್ ಸಿದ್ದಪ್ಪ ಅಣ್ಣಪ್ಪ ಹಡಪದ್, ಶಿವರಾಜ್ ಅಣ್ಣಾರಾವ್ ಪಾಟೀಲ್, ಸಿದ್ದಣ್ಣಗೌಡ ಅಣ್ಣಾರಾವ್ ಪಾಟೀಲ್, ಅಣ್ಣಪ್ಪ ಹಡಪದ್ ಅವರೇ ಕಾರಣ ಎಂದು ದೇವಾನಂದನ ಸಹೋದರ ಕರಣಕುಮಾರ್ ಅವರು ಮಾಡಬೂಳ್ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ನಾಲ್ವರ ವಿರುದ್ಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೂ ಆರೋಪಿಗಳನ್ನು ಪೋಲಿಸರು ಬಂಧಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನರ್ ಹೇಳಿಕೆಯಲ್ಲಿ ಕಲಗುರ್ತಿ ಗ್ರಾಮದ ಬಬ್ಲು ಅಲಿಯಾಸ್ ಬಾಬುಸಾಬ್ ತಂದೆ ಮಹಿಬೂಬಸಾಬ್ ದಂಡೋತಿ ಹಾಗೂ ಅಂಬರೀಷ್ ತಂದೆ ಅಣ್ಣಪ್ಪ ಹೂಗಾರ್, ಪೋಲಿಸ್ ಸಿಬ್ಬಂದಿಗಳಾದ ಕಾಳಗಿ ಸಿಪಿಐ ವಿನಾಯಕ್ ರಾಠೋಡ್, ಮಾಡಬೂಳ್ ಕ್ರೈಂ ಪಿಎಸ್‍ಐ ವೆಂಕಟೇಶ್, ಪಿಎಸ್‍ಐ ವಿಜಯಕುಮಾರ್ ರಾಠೋಡ್, ಮುಖ್ಯ ಪೇದೆ ಜಗನ್ನಾಥ್ ಪಾಟೀಲ್, ಪೋಲಿಸ್ ಪೇದೆಗಳಾದ ಮಳಗೊಂಡ್ ಹಾಗೂ ರಮೇಶ್ ಅವರನ್ನು ಆರೋಪಿಗಳನ್ನಾಗಿಸಿ ಕೂಡಲೇ ಆರೋಪಿತ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಮಾನತ್ತುಗೊಳೀಸಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರವು ಈಗಾಗಲೇ ಸಿಐಡಿಗೆ ಪ್ರಕರಣವನ್ನು ಒಪ್ಪಿಸಿದೆ. ಪೋಲಿಸರೇ ಪ್ರಕರಣದಲ್ಲಿ ಶಾಮೀಲಾಗಿದ್ದರಿಂದ ನಿಷ್ಪಕ್ಷಪಾತ ತನಿಖೆ ಆಗುತ್ತದೆ ಎಂಬ ನಂಬಿಕೆ ಇಲ್ಲ. ಆದ್ದರಿಂದ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಜೀವ ಭಯ ಇರುವುದರಿಂದ ಸೂಕ್ತ ರಕ್ಷಣೆ ಒದಗಿಸುವಂತೆ ಮತ್ತು ಬಡ ಕುಟುಂಬವಾಗಿದ್ದರಿಂದ ರಾಜ್ಯ ಸರ್ಕಾರವು 25 ಲಕ್ಷ ರೂ.ಗಳ ಪರಿಹಾರ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಎಲ್ಲ ಬೇಡಿಕೆಗಳನ್ನು ಸಹಾನುಭೂತಿಯಿಂದ ಕೇಳಿದ ಜಿಲ್ಲಾಧಿಕಾರಿಗಳು, ಈಗಾಗಲೇ ಸಿಓಡಿ ತನಿಖೆಗೆ ಆದೇಶಿಸಲಾಗಿದೆ. ಅವರಿಗೆ ಆ ತನಿಖೆಯ ಮೇಲೆ ನಂಬಿಕೆ ಇಲ್ಲ ಎಂದು ಹೇಳುತ್ತಿದ್ದಾರೆ. ಆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಅಪ್ರಾಪ್ತ ಬಾಲಕಿಯ ಅಪಹರಣದ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಪೋಲಿಸರ ವಿರುದ್ಧವೂ ಆರೋಪ ಮಾಡುತ್ತಿದ್ದು, ಅವರ ವಿರುದ್ಧ ಶಿಸ್ತು ಕ್ರಮದ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇನ್ನು ಬಡ ಕುಟುಂಬವಾಗಿದ್ದರಿಂದ ಪರಿಹಾರ ಕೊಡಲು ಬೇಡಿಕೆ ಇಟ್ಟಿದ್ದಾರೆ. ಪ್ರಕರಣದಲ್ಲಿ ಪರಿಹಾರ ಕೊಡಲು ಬರುವುದಿಲ್ಲ. ಆದಾಗ್ಯೂ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವುದಾಗಿಯೂ ಅವರು ಹೇಳಿದರು.
ನಿರಂತರ ಧರಣಿ ಹಮ್ಮಿಕೊಂಡರೂ ಸಹ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಪ್ರತಿಭಟನೆಕಾರರು ಹಠಾತ್ತನೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ ಮತ್ತು ಸೂಪರ್ ಮಾರ್ಕೆಟ್ ಪ್ರದೇಶಗಳಲ್ಲಿ ನೂರಾರು ಕಾರ್ಯಕರ್ತರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ಮಾಡಿದರು. ಕೊನೆಗೆ ಪೋಲಿಸರು ಲಘು ಲಾಠಿ ಪ್ರಹಾರ ಮಾಡಿದರು. ಹೋರಾಟ ನಿರತ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ್ ಸೇರಿದಂತೆ ಹದಿನೈದಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೋಲಿಸರು ವ್ಯಾನ್ ಹಾಗೂ ಬಸ್‍ನಲ್ಲಿ ಎತ್ತಿಕೊಂಡು ಕರೆದೊಯ್ದರು.