ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿಲು ಒತ್ತಾಯ

ಕಂಪ್ಲಿ ಜ 13 : ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಾಗು ಶ್ರೀ ದೇವಾಂಗ(ದೇವಲ) ಮಹಾಋಷಿ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಇಲ್ಲಿನ ದೇವಾಂಗ ಸಮಾಜದ ಮುಖಂಡರು ಮಂಗಳವಾರ ತಹಸಿಲ್ ಕಚೇರಿ ಆವರಣದಲ್ಲಿ ತಹಸೀಲ್ದಾರ್ ಗೌಸಿಯಾ ಬೇಗಂ ಮುಖೇನ ಸರ್ಕಾರಕ್ಕೆ ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ದೇವಾಂಗ ಸಮಾಜವು ಸುಮಾರು 30 ಲಕ್ಷದಷ್ಟು ಜನ ಸಂಖ್ಯೆ ಹೊಂದಿದೆ. ಸಮಾಜದ ಗುರುಪೀಠ ಅಖಿಲ ಭಾರತೀಯ ದೇವಾಂಗ ಜಗದ್ಗುರು, ಶ್ರೀ ಗಾಯತ್ರಿ ಪೀಠವು ಹಂಪಿಯಲ್ಲಿದ್ದು ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮಿಗಳ ಕೃಷಾಶೀರ್ವಾದಗಳಿಂದ ಸಾಗುತ್ತಿದೆ. ನಮ್ಮ ಕುಲಕಸಬು ನೇಕಾರಿಕೆಯು ನಷ್ಟದ ಉದ್ದಿಮೆಯಾಗಿದ್ದರಿಂದಾಗಿ ಶೇ.90ರಷ್ಟು ನಮ್ಮವರು ಸುಮಾರು 100 ವರ್ಷಗಳಿಂದಲೇ ನೇಕಾರಿಕೆ ವೃತ್ತಿ ತ್ಯಜಿಸಿ ಬೇರೆ-ಬೇರೆ ಅಂದರೆ ಕೃಷಿ ಕೂಲಿ ಕಾರ್ಮಿಕರು, ಕೂಲಿಕಾರರು, ಕಿರುಕುಳ ವ್ಯಾಪಾರಿಗಳಾಗಿ ಟೀ ಅಂಗಡಿ, ಬೀಡಿ ಅಂಗಡಿಗಳನ್ನು ಹಾಗು ಬೀದಿ ಬದಿ ವ್ಯಾಪಾರಿಗಳಾಗಿ ಮಾರ್ಪಟ್ಟಿದ್ದು ತುಂಬಾ ಕಷ್ಟದ ಜೀವನವನ್ನು ಸಾಗಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಸಮಾಜವು ಆರ್ಥಿಕವಾಗಿ-ಸಾಮಾಜಿಕ-ಶೈಕ್ಷಣಿಕವಾಗಿ ಬಹಳ ಹಿಂದುಳಿದಿದೆ ಎಂದು ತಿಳಿಸಲು ವಿಷಾದಿಸುತ್ತೇವೆ. ಅಲ್ಲದೆ ಹಿಂದುಳಿದ ವರ್ಗಗಳ ಇಲಾಖೆಯಲ್ಲಿನ 2ಎ ವರ್ಗದಲ್ಲಿ ಇದ್ದ ನಮ್ಮ ಸಮಾಜದ ವಿಶೇಷ ಮೀಸಲು ಕೂಡ ರದ್ದಾಗಿದೆ. ಈಗಾಗಲೇ ಮಹಾರಾಷ್ಟ್ರ ಸರಕಾರವು ಪ್ರವರ್ಗ ‘2ಎ’ನಲ್ಲಿ ನಮ್ಮ ದೇವಾಂಗ ಸಮಾಜಕ್ಕೆ ಶೇಕಡಾ 2ರಷ್ಟು ಮೀಸಲಾತಿ ನೀಡಿದೆ. ಅದರಂತೆ, ತಮಿಳುನಾಡು ಸರಕಾರವು ಮೀಸಲಾತಿ ನೀಡಿದೆ. ಒಂದು ಹೆಜ್ಜೆ ಮುಂದುವರಿದು ಆಂಧ್ರಪ್ರದೇಶ ಸರಕಾರವು ದೇವಾಂಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. ಸರ್ಕಾರದಿಂದ ರಾಜ್ಯದಲ್ಲಿ ಉಪ್ಪಾರ, ಅಂಬಿಗರಚೌಡಯ್ಯ, ವಿಶ್ವಕರ್ಮ,ಆರ್ಯವೈಶ್ಯ,ಮಡಿವಾಳ ಹಾಗು ವೀರಶೈವ ಲಿಂಗಾಯತ ಸಮುದಾಯಗಳ ಅಭಿವೃದ್ಧಿ ಸಮಿತಿಗಳನ್ನು ಸ್ಥಾಪಿಸಲಾಗಿದೆ. ಅದರಂತೆ ನಮ್ಮ ದೇವಾಂಗ ಸಮಾಜದ ಅಳಿವು-ಉಳಿವಿನ ದೃಷ್ಠಿಯನ್ನಿಟ್ಟುಕೊಂಡು ನಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿ ಹಾಗೂ ಏಳಿಗೆಗಾಗಿ ನಮ್ಮ ಈ ಬೇಡಿಕೆಯನ್ನು ಸ್ವೀಕರಿಸಿ ಹಾಗೂ ಈಡೇರಿಸಿ. ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವುದರ ಜೊತೆಗೆ ದೇವಾಂಗ (ದೇವಲ) ಮಹಾಋಷಿ ಜಯಂತಿಯನ್ನು ಸರಕಾರದ ನೇತೃತ್ವದಲ್ಲಿ ಆಚರಿಸುವಂತೆ ಅನುವು ಮಾಡಿಕೊಡಬೇಕಿದೆ ಎಂದು ಕಂಪ್ಲಿ ದೇವಾಂಗ ಸಮಾಜದ ಮಾಜಿ ಅಧ್ಯಕ್ಷ ಮುಖಂಡ ಅಗಳಿ ಪಂಪಾಪತಿ, ಕುಲಗುರುಗಳಾದ ಮುದ್ದುಸಂಗ ಸ್ವಾಮೀಜಿ, ಸಮಾಜದ ಮುಖಂಡರಾದ ಅಗಳಿ ಮಲ್ಲಯ್ಯ, ಗದಿಗಿ ಹೇಮಂತರಾಜ್, ಎಂ.ವೆಂಕಟೇಶ್, ವೈ ಷಣ್ಮುಖ, ಗದಿಗಿ ರಮೇಶ್, ಎಂ.ಅಂಬರೀಷ, ಡಿ.ಬಸವರಾಜ
ಸೇರಿದಂತೆ ಇನ್ನಿತರೆ ಮುಖಂಡರು ಸರ್ಕಾರಕ್ಕೆ ಆಗ್ರಹಿಸಿದರು.