ದೇವಸ್ಥಾನಕ್ಕೆ ಹೋದ ಮಹಿಳೆಯ ಸರಗಳ್ಳತನ

ಕಲಬುರಗಿ,ಸೆ.23-ನಗರದ ಖೂಬಾ ಪ್ಲಾಟ್‍ನಲ್ಲಿರುವ ಈಶ್ವರ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಮರಳಿ ಮನೆಯ ಕಡೆಗೆ ಹೊರಟಿದ್ದ ಮಹಿಳೆಯ ಕೊರಳಲ್ಲಿನ ಚಿನ್ನದ ಸರ ಕಿತ್ತುಕೊಂಡು ಸರಗಳ್ಳರು ಪರಾರಿಯಾಗಿದ್ದಾರೆ.
ನಗರದ ಅರಣ್ಯ ಕಚೇರಿ ಹತ್ತಿರದ ಶ್ರದ್ಧಾ ರೆಸಿಡೆನ್ಸಿಯ ರುದ್ರಕಲಾ ಶಶಿಧರ ಸುಗೂರ (52) ಅವರು ಬೆಳಿಗ್ಗೆ 8.30ರ ಸುಮಾರಿಗೆ ಖೂಬಾ ಪ್ಲಾಟ್‍ನಲ್ಲಿರುವ ಈಶ್ವರ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ದೇವಸ್ಥಾನ ಹತ್ತಿರದ ಸಿಮೆಂಟ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಲಾಹೋಟಿ ಕಡೆಯಿಂದ ಬೈಕ್ ಮೇಲೆ ಬಂದ 25 ರಿಂದ 30 ವರ್ಷ ವಯಸ್ಸಿನ ಇಬ್ಬರು ಯುವಕರು ಅವರ ಕೊರಳಲ್ಲಿನ 75 ಸಾವಿರ ರೂ.ಮೌಲ್ಯದ 15 ಗ್ರಾಂ.ಬಂಗಾರದ ಓಂ ಚಿತ್ರವುಳ್ಳ ಲಾಕೇಟ್ ಮತ್ತು 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ತಾಳಿ ಸರ ಕಿತ್ತುಕೊಂಡು ಪರರಾರಿಯಾಗಿದ್ದಾರೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.