ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಾಣ ತೆರವಿಗೆ ಮನವಿ

ಬೆಂಗಳೂರು ಸೆ. ೧೬- ನಗರದ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಸೇರಿದ ನೀಲಸಂದ್ರ ಗ್ರಾಮದ ಸರ್ವೇನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡ ತೆರವುಗೊಳಿಸಿ ದೇವಾಲಯದ ವಶಕ್ಕೆ ನೀಡುವಂತೆ ಕರ್ನಾಟಕ ರಾಜ್ಯ ತಿಗಳರ ಸಂಘ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
ಸರ್ವೆ ನಂ ೭೯ ರ ೧೫ ಏಕರೆ ೧೨ ಗುಂಟೆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಯರಾಜ್ ನೇತೃತ್ವದಲ್ಲಿ ತಿಗಳ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಸುಬಣ್ಣ ಹಾಗೂ ಹೂಡಿ ವಿಜಯಕುಮಾರ್ ಮನವಿ ಮಾಡಿದ್ದಾರೆ.
ಉತ್ತರ ತಾಲ್ಲೂಕು ಕಸಬಾ ಹೋಬಳಿ ನೀಲಸಂದ್ರ ಗ್ರಾಮದ ಸರ್ವೇ ನಂ ೭೯ ರ ವಿಸ್ತೀರ್ಣ ೧೫ ಏಕರೆ ೧೨ ಗುಂಟೆ ಜಮೀನು ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ಇನಾಂ ಜಮೀನಾಗಿದೆ ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.
ಈ ಪೈಕಿ ೬ ಏಕರೆ ಜಮೀನಿನಲ್ಲಿ ಅನಧಿಕೃತವಾಗಿ ವಾಸದ ಮನೆಗಳನ್ನು ನಿರ್ಮಿಸಿಕೊಂಡಿದ್ದು ಅದರ ವಿರುದ್ದ ಹೈ ಕೋರ್ಟ್‌ನಲ್ಲಿ ಕೇಸ್ ದಾಖಲಿಸಲಾಗಿರುತ್ತದೆ. ಉಳಿದ ೯ ಏಕರೆ ಜಮೀನು ಖಾಲಿ ಇದ್ದು ಆ ಜಾಗವನ್ನು ದೇವಾಲಯದ ವಶಕ್ಕೆ ನೀಡಬೇಕು ಮತ್ತು ಅದರ ಸುತ್ತ ತಂತಿ ಬೇಲಿಯನ್ನು ಹಾಕಿಸಬೇಕು ಎಂದು ಸುಪ್ರೀಂ ಕೋರ್ಟ್ ೨೦೧೫ ರಲ್ಲಿ ಆದೇಶ ನೀಡಿದೆ. ಅದರಂತೆ ಜಿಲ್ಲಾಧಿಕಾರಿಗಳು ೯ ಏಕರೆ ಜಮೀನನ್ನು ಪೂರ್ಣವಾಗಿ ಖಾಲಿ ಮಾಡಿಸಿ ದೇವಾಲಯದ ವಶಕ್ಕೆ ನೀಡಿದ್ದರು. ಆದರೆ, ಈಗ ಖಾಲಿ ಇದ್ದಂತಹ ಜಾಗದಲ್ಲಿ ಸುಮಾರು ೪೦ ರಿಂದ ೫೦ ಕ್ಕೂ ಹೆಚ್ಚು ಮನೆಗಳನ್ನು ಕಟ್ಟಲಾಗಿದೆ. ಈ ಜಮೀನಿನಲ್ಲಿ ಕಟ್ಟಲಾಗಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ.