ದೇವಸೇನ ಮುನಿಮಹಾರಾಜರು ಯಮಸಲ್ಲೇಖನ ವೃತ ಪೂರ್ವಕ ಸಮಾಧಿ

ಕಾಗವಾಡ : ಸೆ.25:ಆಚಾರ್ಯ ಶ್ರೀ 108 ಸುಬಲಸಾಗರ ಮುನಿಮಹಾರಾಜರ ಪರಮಶಿಷ್ಯರಾದ ಶ್ರೀ ಶಾಂತಮೂರ್ತಿ ಆಚಾರ್ಯ ಶ್ರೀ 108 ದೇವಸೇನ ಮುನಿಮಹಾರಾಜರು ಶೇಡಬಾಳ ಗ್ರಾಮದ ಶ್ರೀ ಶಾಂತಿಸಾಗರ ಆಶ್ರಮದಲ್ಲಿ ಶುಕ್ರವಾರ ದಿ. 24 ರಂದು ಮಧ್ಯಾಹ್ನ 2.45 ಗಂಟೆ ಸುಮಾರಿಗೆ ಯಮಸಲ್ಲೇಖನ ವೃತ ಪೂರ್ವಕವಾಗಿ ಸಮಾಧಿ ಮರಣ ಸಾಧಿಸಿದರು.
ಅವರ ಅಂತ್ಯಕ್ರೀಯೆಯು ಅನೇಕ ಪೂಜ್ಯರು, ಭಟ್ಟಾರಕರು, ಮುನಿಗಳು, ಮಾತಾಜಿಯವರು ಹಾಗೂ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ಸಾಯಂಕಾಲ ಜರುಗಿತು.
ಇಲ್ಲಿನ ಶ್ರೀ ಶಾಂತಿಸಾಗರ ಆಶ್ರಮದಲ್ಲಿ ಶುಕ್ರವಾರ ದಿ. 24 ರಂದು ಮಧ್ಯಾಹ್ನ 2.45 ಗಂಟೆ ಸುಮಾರಿಗೆ ದೇವಸೇನ ಮುನಿಮಹಾರಾಜರು ಸಮಾಧಿ ಮರಣ ಹೊಂದಿದರು.
ನಾಂದಣಿ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ, ರಾಜಸ್ಥಾನ ತಿಜೋರಾದ ಸ್ವಸ್ತಿಶ್ರೀ ಪ.ಪೂ. ಸೌರಭಸೇನ ಮುನಿಮಹಾರಾಜರ ಹಾಗೂ ಮಾತಾಜಿಯವರ ನೇತೃತ್ವದಲ್ಲಿ ಅಂತ್ಯಕ್ರೀಯೆ, ಪೂಜಾ ವಿಧಿ ವಿಧಾನಗಳು ಜರುಗಿದವು.
ಶ್ರೀಗಂಧ ಕಟ್ಟಿಗೆ, ಕೊಬ್ಬರಿ, ಹಾಲು, ತುಪ್ಪ, ಕರ್ಪೂರ, ಚಂದನ ಮೊದಲಾದ ಪದಾರ್ಥಗಳಿಂದ ಸ್ವಾಮಿಜಿಯವರ ಅಂತ್ಯಕ್ರೀಯೆ ಮಾಡಲಾಯಿತು.
ಅಂತ್ಯಕ್ರೀಯೆ ಪೂರ್ವದಲ್ಲಿ ಪ್ರತಿಷ್ಟಾಚಾರ್ಯ ಶಾಂತಿನಾಥ ಉಪಾಧ್ಯೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಶಾಸ್ತ್ರೋಕ್ತವಾಗಿ ಪೂಜಾ ವಿಧಿ ವಿಧಾನಗಳ ನಂತರ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು.

ಈ ಸಮಯದಲ್ಲಿ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ, ರಾಜಸ್ಥಾನ ತಿಜೋರಾದ ಸ್ವಸ್ತಿಶ್ರೀ ಪ.ಪೂ. ಸೌರಭಸೇನ ಮುನಿಮಹಾರಾಜರು, ಮಾತಾಜಿ, ಅಜೀತ ಕುಚನೂರೆ, ಆಶ್ರಮದ ಸಂಚಾಲಕ ರಾಜು ನಾಂದ್ರೆ, ಮಾಜಿ ಶಾಸಕ ಕೆ.ಪಿ.ಮಗೆಣ್ಣವರ, ಅರುಣಕುಮಾರ ಯಲಗುದ್ರಿ ಸೇರಿದಂತೆ ಬೆಳಗಾವಿ, ಸಾಂಗಲಿ, ಕೊಲ್ಹಾಪೂರ, ಜಮಖಂಡಿ, ಬಾಗಲಕೋಟ ಜಿಲ್ಲೆಗಳಿಂದ ಸಾವಿರಾರು ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.


ದೇವಸೇನ ಮುನಿಮಹಾರಾಜರ ಪರಿಚಯ:
ಆಚಾರ್ಯ ಶ್ರೀ 108 ದೇವಸೇನ ಮುನಿಮಹಾರಾಜರು 17/02/1938 ರಂದು ಮುತ್ತೂರು ಗ್ರಾಮದಲ್ಲಿ ಜನ್ಮತಾಳಿದರು. 1992 ರಲ್ಲಿ ಕ್ಷುಲ್ಲಕ ದೀಕ್ಷೆ ಪಡೆದುಕೊಂಡರು. 1996 ರಲ್ಲಿ ಶೇಡಬಾಳದಲ್ಲಿ ಮುನಿದೀಕ್ಷೆ ಹೊಂದಿದರು. 2004 ರಲ್ಲಿ ಆಚಾರ್ಯ ಪದವಿ ಪಡೆದುಕೊಂಡ ಅವರು ಹಲವಾರು ಸಲ ಕಾಲ್ನಡಿಗೆಯ ಮೂಲಕ ಜೈನ ತೀರ್ಥ ಕ್ಷೇತ್ರಗಳ ದರ್ಶನ ಪಡೆದುಕೊಂಡು ಆತ್ಮಕಲ್ಯಾಣದ ಜತೆಗೆ ಧರ್ಮ ಪ್ರಭಾವನೆ ಕೈಗೊಂಡಿದ್ದರು. 24/09/2021 ರಂದು ಯಮಸಲ್ಲೇಖನ ಪೂರ್ವಕವಾಗಿ ಸಮಾಧಿ ಮರಣ ಸಾಧಿಸಿದ್ದಾರೆ.