ದೇವರ ಹೆಸರಲ್ಲಿ ಗುಂಪು ಸೇರಬೇಡಿ

 ಚಿತ್ರದುರ್ಗ. ಜೂ.೫; ಗ್ರಾಮಗಳ ಸುತ್ತ ಮುತ್ತ ತಮಟೆ ಸಾರಿಸಿ ಕರೋನಮ್ಮ ದೇವಿಯನ್ನ ಸಂತೃಪ್ತಗೊಳಿಸಲು ಮೊಸರನ್ನ ಮಾಡಿಕೊಂಡು ಬಂದು, ದೇವಸ್ಥಾನಕ್ಕೆ ಏಡೆ ಸಲ್ಲಿಸಿ ಎಂದು ಜನರನ್ನ ದೇವಸ್ಥಾನಗಳ ಬಳಿಗೆ ಸೆಳೆಯುತ್ತಿರುವುದು ಆಘಾತಕಾರಿಯಾಗಿದೆ. ಕೊರೋನ ನಿಯಂತ್ರಣಕ್ಕೆ ಬರುತ್ತಿರುವ ಸಂದರ್ಭದಲ್ಲಿ ಮತ್ತೆ ನಾವು ಜನರನ್ನ, ದೇವರ ಹೆಸರಲ್ಲಿ, ಮೂಢ ನಂಬಿಕೆಗಳ ಹೆಸರಲ್ಲಿ, ಜನರನ್ನು ಗುಂಪು ಸೇರಿಸುವುದು, ಸಾಮಾಜಿಕ ಅಪರಾಧವಾದಂತಾಗುತ್ತದೆ. ಕಷ್ಟಪಟ್ಟು, ಕೋಟ್ಯಂತರ ರೂಪಾಯಿಗಳನ್ನು ನಷ್ಟ ಅನುಭವಿಸಿ, ಕರೋನವನ್ನು ನಿಯಂತ್ರಿಸಿದ್ದ ವ್ಯವಸ್ಥೆಯನ್ನ, ಕೆಲವೇ ನಿಮಿಷಗಳಲ್ಲಿ ಹಾಳಗೆಡವಿದಂತಾಗುತ್ತದೆ. ಹಾಗಾಗಿ ಗ್ರಾಮಸ್ಥರು ಜೀವದ ಜೊತೆ ಹುಡುಗಾಟ ಮಾಡದೆ, ವೈಜ್ಞಾನಿಕ ಜ್ಞಾನವನ್ನು ಸಂಪಾದಿಸಿಕೊಂಡು, ಕೊರೋನ ನಿಗ್ರಹಕ್ಕೆ ಸಹಕರಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ನಗರದ ಕೋಟೆ, ಕಾಮನ ಬಾವಿ, ಉಚ್ಚಂಗಿ ಎಲ್ಲಮ್ಮ ದೇವಸ್ಥಾನದ ಬಳಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಕೇಂದ್ರ ಮತ್ತು ಚಿತ್ರ ಡಾನ್ ಬೋಸ್ಕೋ ಸಹಯೋಗದೊಂದಿಗೆ ಆಯೋಜಿಸಿದ್ದ “ಗ್ರಾಮಗಳಲ್ಲಿ ಮೂಢನಂಬಿಕೆಗಳು” ಎಂಬ ವಿಷಯದ ಬಗ್ಗೆೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಎಲ್ಲ ದೇವಸ್ಥಾನಗಳಲ್ಲೂ ಸಹ ಜನರು ದೂರ ನಿಂತು, ವೈಯಕ್ತಿಕವಾಗಿ ಪೂಜೆಗಳನ್ನ ಮಾಡಿಕೊಂಡು ಹೋಗಬಹುದೇ ವಿನಃ, ಸಾಮೂಹಿಕವಾಗಿ ಯಾವುದೇ ಪೂಜೆಗಳನ್ನು ಮಾಡಬಾರದೆಂದು ಸರ್ಕಾರ ನಿಯಮಮಾಡಿದೆ. ಆದರೆ ಈಗ ಗ್ರಾಮಸ್ಥರು, ಸಣ್ಣಸಣ್ಣ ದೇವಸ್ಥಾನದ ಆಡಳಿತ ಮಂಡಳಿಯವರು, ಕರೋನಮ್ಮ ಹೆಸರಿನಲ್ಲಿ ಮೊಸರನ್ನ ತಂದು ಒಪ್ಪಿಸಿ ಎಂದು ತಮಟೆ ಬಾರಿಸಿ, ಮನೆಯಲ್ಲಿರುವ ಮುಗ್ಧ ಮಹಿಳೆಯರನ್ನ, ದೇವಸ್ಥಾನಕ್ಕೆ ಸೆಳೆಯುತ್ತಿರುವುದು ದುರಂತದ ಸಂಗತಿಯಾಗಿದೆ. ಇದರ ಬಗ್ಗೆ ವೈಜ್ಞಾನಿಕ ಜ್ಞಾನ ಹೆಚ್ಚಿಸಬೇಕಾಗಿದೆ. ಗ್ರಾಮಗಳಲ್ಲಿರುವ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಶಿಕ್ಷಕರು, ಸಮಾಜ ಸುಧಾರಕರು, ವೈದ್ಯರು, ಪಾರಂಪರಿಕ ವೈದ್ಯರು, ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಿ, ಜನರನ್ನು ಸರಿದಾರಿಗೆ ಕೊಂಡೊಯ್ಯಬೇಕು ಎಂದು ತಿಳಿಸಿದರು.ಗ್ರಾಮದ ಜನರಿಗೆ ದೇವರ ಮೇಲೆ ಇರುವ ಅಗಾಧವಾದ ನಂಬಿಕೆಯನ್ನ ಯಾರೂ ಸಹ ಅಲ್ಲಗೆಳೆಯಲಾರರು, ಆದರೆ ಅವರ ದೈವಭಕ್ತಿಯನ್ನ ಮೂಢನಂಬಿಕೆಗಳತ್ತ ಕೊಂಡಯ್ಯಬಾರದು. ಸಾಮೂಹಿಕವಾಗಿ ಪೂಜೆ ಸಂದಭದಲ್ಲಿ, ಎಷ್ಟೋ ಜನ ಮಾಸ್ಕ್ ಧರಿಸದೇ, ದೇವಸ್ಥಾನದ ಬಳಿ ಬಂದು ಹೋಗುತ್ತಾರೆ. ಅವರು ಕೊರೋನವನ್ನು ಹರಡಲು ಸಹಾಯಕರಾಗುತ್ತಾರೆ. ಮೊದಲು ಗ್ರಾಮಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ನಗರದ ಜನರನ್ನು ಗ್ರಾಮಕ್ಕೆ ಬರದಂತೆ ತಡೆದಿದ್ದರು, ಈಗ ಅವರೇ ಬಾಗಿಲನ್ನು ತೆರೆದು, ಗ್ರಾಮಗಳನ್ನ ಅಸುರಕ್ಷಿತಗೊಳಿಸಬಾರದು ಎಂದರು.ನಗರಗಳಿಂದ ವಲಸೆ ಬಂದ ಗ್ರಾಮದ ಜನರು ಈಗ ಮತ್ತೆ ನಗರಗಳಿಗೆ ಮರುವಲಸೆ ಮಾಡುತ್ತಿದ್ದು, ನಗರಗಳಲ್ಲಿ ಕರೋನ ಹರಡಿದಂತಾಗುತ್ತದೆ. ಅದ್ದರಿಂದ ಜನರು ಜಾಗ್ರತೆಯಿಂದ ಮನೆಯಲ್ಲಿದ್ದು ವೈದ್ಯರಿಗೆ, ಸರ್ಕಾರಕ್ಕೆ, ಸಹಕರಿಸಬೇಕಾಗಿ ವಿನಂತಿಸಿಕೊಂಡರು.ಕಾರ್ಯಕ್ರಮದಲ್ಲಿ  ದಯಾನಂದ್, ರಾಜಣ್ಣ, ಮಹೇಶ್, ಹೆಚ್.ಎಸ್. ಪ್ರೇರಣ, ಪುರಾತತ್ವ ಇಲಾಖೆಯ ಸಿಬ್ಬಂದಿ ಹಾಜರಿದ್ದರು.