ದೇವರ ದಾಸಿಮಯ್ಯ ಮಾದರಿ: ಬಳ್ಳಾರಿ

ಬ್ಯಾಡಗಿ, ಏ 18: ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ತೋರಿಸಿದ ವಚನಕಾರ ದೇವರ ದಾಸಿಮಯ್ಯನವರು ಸರ್ವ ಸಮುದಾಯಗಳಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಭವನದಲ್ಲಿ ನಡೆದ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ವಚನಗಳನ್ನು ಆಲಿಸುವುದರಿಂದ ಜೀವನದಲ್ಲಿ ಸ್ಫೂರ್ತಿ ಹೆಚ್ಚುತ್ತದೆ. ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಲು ಶರಣರ ವಚನಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎನ್.ತಿಮ್ಮಾರೆಡ್ಡಿ ಉಪನ್ಯಾಸ ನೀಡಿ, ನೇಕಾರ ಸಮಾಜದಲ್ಲಿ ಹುಟ್ಟಿ ಬೆಳೆದ ದೇವರ ದಾಸಿಮಯ್ಯ ಕಾಯಕಯೋಗಿಯಾಗಿ ಗುರುತಿಸಿಕೊಂಡಿದ್ದರು. ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ದೇವರ ದಾಸಿಮಯ್ಯನವರು ಕೇವಲ ನೇಕಾರ ಸಮಾಜಕ್ಕೆ ಮಾತ್ರ ಸೀಮಿತವಾಗದೇ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಆಶಯ ಹಾಗೂ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ರವಿಕುಮಾರ ಕೊರವರ, ಸಮಾಜ ಕಲ್ಯಾಣಾಧಿಕಾರಿ ಎಚ್.ಟಿ.ಲಮಾಣಿ, ಪುರಸಭಾ ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಸದಸ್ಯೆ ಫಕ್ಕೀರಮ್ಮ ಚಲುವಾದಿ, ಗಂಗಣ್ಣ ಎಲಿ, ಸುರೇಶ ಆಸಾದಿ, ಜಿತೇಂದ್ರ ಸುಣಗಾರ, ದೇವಾಂಗ ಸಮಾಜದ ಅಧ್ಯಕ್ಷ ಡಾ. ಬಿ.ಆರ್. ಹೊತಗಿಗೌಡ್ರ, ಮುಖಂಡರಾದ
ಎಸ್.ಜಿ.ಮುದ್ದಣ್ಣನವರ, ವಸಂತ ಕುಂಚೂರ, ಗಣೇಶ ಮಾಗಳದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.