ದೇವರ ದಾಸಿಮಯ್ಯ ಮತ್ತು ಭಗವಾನ ಮಹಾವೀರ ಜಯಂತಿ ಸರಳವಾಗಿ ಆಚರಣೆಗೆ ನಿರ್ಣಯ

ಕಲಬುರಗಿ,ಏ.16: ಇದೇ ಏ.17 ರಂದು ದೇವರ ದಾಸಿಮಯ್ಯ ಮತ್ತು ಏ.25 ರಂದು ಭಗವಾನ ಮಹಾವೀರ ಅವರ ಜಯಂತಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯು ನಿರ್ಣಯಿಸಿದೆ.
ಏ.17 ರಂದು ದೇವರ ದಾಸಿಮಯ್ಯ ಮತ್ತು ಏ.25 ರಂದು ಭಗವಾನ ಮಹಾವೀರ ಅವರ ಜಯಂತಿಯ ದಿನದಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಗುವುದು.
ಕೋವಿಡ್ ಎರಡನೇ ಅಲೆ ಹೆಚ್ಚಳವಾದ ಕಾರಣ ಎಲ್ಲಾ ಶರಣರ ಜಯಂತಿಯಂತೆ ಇಲ್ಲಿಯೂ ಮೆರವಣಿಗೆ, ಸಾರ್ವಜನಿಕ ಸಭೆ, ಉಪನ್ಯಾಸ ಇರುವುದಿಲ್ಲ ಎಂದರು.
ಸಭೆಯಲ್ಲಿ ಭಾಗವಹಿಸಿದ ಜೈನ ಸಮಾಜದ ಮುಖಂಡರು ಏ.25 ರಂದು ಮಹಾವೀರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವುದು ಬೇಡ. ಬದಲಾಗಿ ಸರಳವಾಗಿಯೆ ಆಚರಿಸಬೇಕು ಮತ್ತು ಜನತೆಯ ಹಿತಕ್ಕಾಗಿ ಜಿಲ್ಲಾಡಳಿತ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಗೊಳ್ಳುವ ಕ್ರಮಕ್ಕೆ ಸಮಾಜವು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಲಿಖಿತ ಪತ್ರವನ್ನು ಡಾ.ಶಂಕರ ವಣಿಕ್ಯಾಳ ಅವರಿಗೆ ನೀಡಿದರು.
ಸಭೆಯಲ್ಲಿ ಡಿ.ಎಸ್.ಪಿ. ಜೇಮ್ಸ್ ಮಿನೇಜಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಅಖಿಲ ಕರ್ನಾಟಕ ಶ್ರೀ ದೇವರ ದಾಸಿಮಯ್ಯು ಹಠಗಾರ ಸಮಾಜದ ರಾಜ್ಯಾಧ್ಯಕ್ಷ ಚಂದ್ರಶೇಖರ ಸುಲ್ತಾನಪುರ, ಉಪಾಧ್ಯಕ್ಷ ರುದ್ರಪ್ಪ ಗಂಜಿ, ಜಂಟಿ ಕಾರ್ಯದರ್ಶಿ ಭೀಮಾಶಂಕರ ರಾಜುಗುಂಡೆ, ಮುಖಂಡರಾದ ಶ್ರೀಶೈಲ ರಾಜಶೇಖರ ಬುಳ್ಳಾ, ಸತೀಶ ಜಮಖಂಡಿ, ಗಾಜಿಪೂರದ ಶ್ರೀ 1008 ಆದಿನಾಥ ದಿಗಂಬರ ಜೈನ ಮಂದಿರದ ಅಧ್ಯಕ್ಷ ನಾಗನಾಥ ಚಿಂದೆ, ಸರಫ್ ಬಜಾರ ಶ್ರೀ 1008 ಮಹಾವೀರ ಜೈನ ಮಂದಿರದ ಅಧ್ಯಕ್ಷ ಚಂದ್ರಮೋಹನ ಶಹಾ, ಸಂಕೇಶ್ವರ ಪಾರ್ಶನಾಥ ಜೈನ ಶ್ವೇತಾಂಬರ ಸಂಘದ ಅಧ್ಯಕ್ಷ ಲಾಲ್‍ಚಂದ ಜೈನ, ಕಲಬುರಗಿ ಜೈನ ಸೋಷಿಯಲ್ ಗ್ರೂಪ್ಪಿನ ಸಿ.ಎ ಸುನೀಲ ಲೋಡಾ ಸೇರಿದಂತೆ ಇನ್ನಿತರ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದರು.