ದೇವರೊಬ್ಬರನ್ನು ಬಿಟ್ರೆ ಬಳ್ಳಾರಿಯಲ್ಲಿ ಯಾರೇ ಬಂದ್ರು ಎದುರಿಸುವ ಶಕ್ತಿ ನನಗೆ ಇದೆ: ನಾಗೇಂದ್ರ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ನ 30 : ಹಲವರು ನನ್ನ ಬಗ್ಗೆ ಕ್ಷೇತ್ರ ಬದಲಾವಣೆ ಮಾಡ್ತಾರೆ ಎಂಬ ಬಗ್ಗೆ ಊಹಾ ಪೋಹದ ಸುದ್ದಿ ಹರಿಬಿಟ್ಟಿದ್ದಾರೆ. ಅದು ಯಾಕೋ ಗೊತ್ತಿಲ್ಲ. ಈ ಸುಳ್ಳು ಹೀಗೆ ಹರಿದಾಡಿ ಸತ್ಯ ಮಾಡಬೇಕೆಂದುಕೊಂಡಿದ್ದಾರೆ. ಆದರೆ ನಾನು ದೇವರೊಬ್ಬರನ್ನು ಬಿಟ್ರೆ ಬಳ್ಳಾರಿಯಲ್ಲಿ
ಯಾರೇ ಬಂದ್ರು ಎದುರಿಸುವ ಶಕ್ತಿ ಕಾಂಗ್ರೆಸ್ ನನಗೆ ನೀಡಿದೆ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣಾ ಪ್ರಚಾರದ ಸಭೆ ಕಳೆದ ಶನಿವಾರ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿತ್ತು. ಸಭೆಯಲ್ಲಿ ಎಂ.ಎಲ್.ಸಿ. ಅಲ್ಲಂ ವೀರಭದ್ರಪ್ಪ ಅವರು ನಮ್ಮ ನಾಗೇಂದ್ರ ಅವರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲೂ ನಿಂತರೂ ಗೆದ್ದು ಬರುತ್ತಾರೆಂದರು.
ಅಲ್ಲಂ ಅವರ ಈ ಮಾತಿಗೂ ಮತ್ತು ಇದಕ್ಕೂ ಮೊದಲು ಕೆಲ ಮಾಧ್ಯಮಗಳಲ್ಲಿ  ಸಚಿವ ಶ್ರೀರಾಮುಲು ಅವರು  ಬರುವ 2023 ರ ವಿಧಾನ ಸಭಾ ಚುನಾವಣೆಯಲ್ಲಿ  ಮತ್ತೆ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಬರಲಿದ್ದಾರೆ. ಅದಕ್ಕಾಗಿ ಹೊಂದಾಣಿಕೆ ರಾಜಕೀಯದಿಂದ. ನಾಗೇಂದ್ರ ಅವರು ಸಿರುಗುಪ್ಪ ಕ್ಷೇತ್ರಕ್ಕೆ ಹೋಗುತ್ತಾರಂತೆ ಎಂದು ಬರೆಯಲಾಗಿತ್ತು.
ಈ ಎರಡಕ್ಕೆ ಉತ್ತರ ಎಂಬಂತೆ. ಬಳ್ಳಾರಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ಹೆಚ್ಚು. ಅದನ್ನು ಸತ್ಯ ಮಾಡಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ನಾನು ಈಗಲೇ ಸ್ಪಷ್ಟಪಡಿಸುತ್ತೇನೆ. ಬರುವ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಅದೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿಯೇ ಸ್ಪರ್ಧೆ ಮಾಡುತ್ತೇನೆ. ನನಗೆ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರಾದ ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ನಾಸೀರ್ ಹುಸೇನ್ ಮೊದಲಾದ ಮುಖಂಡರ ಬೆಂಬಲ ಇರುವಾಗ ಅದರಲ್ಲೂ ನನಗೆ ಕಾಂಗ್ರೆಸ್ ಪಕ್ಷದ ಆಶಿರ್ವಾದ ಇರುವವರೆಗೆ ಬಳ್ಳಾರಿಯಲ್ಲಿ ನನ್ನನ್ನು ಆ ದೇವರು ಒಬ್ಬನು ಬಿಟ್ಟರೆ ಮತ್ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎಂದರು.
ಕ್ಷೇತ್ರ ಬದಲಾವಣೆ ಮಾಡುತ್ತಾರೆಂದು ಸುದ್ದಿ ಹಬ್ಬಿಸಿದವರಿಗೆ ಈ ಮಾತಿನ ಮೂಲಕ ಚಾಟಿ ಬೀಸಿದ್ದಾರೆ.