ದೇವರೇ ಕಾಪಾಡು ಭಾರತೀಯರ ಮೊರೆ!

ನವದೆಹಲಿ,ಏ.೨೩- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಮತ್ತೆ ೩ ಲಕ್ಷ ಗಡಿ ದಾಟುವ ಮೂಲಕ ಜಗತ್ತಿನಲ್ಲಿ ಸತತ ಎರಡನೇ ದಿನವೂ ದಾಖಲೆಯ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕೋರೊನಾ ಆರ್ಭಟದ ಮುಂದೆ ಭಾರತ ತಬ್ಬಿಬ್ಬು ಆಗಿದೆ.
ನಿನ್ನೆ ದೇಶದಲ್ಲಿ ೩.೧೪ ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡು ಜಗತ್ತಿನಲ್ಲಿ ದಾಖಲೆ ಬರೆದಿತ್ತು. ನಿನ್ನೆಗಿಂತ ಇಂದು ಇನ್ನೂ ಒಂದೆ ಹೆಜ್ಜೆ ಮುಂದೆ ಹೋಗಿ ೩.೩೨ ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದು ಸಹಜವಾಗಿ ಭಾರತವನ್ನು ಅಕ್ಷರಷಃ ಸಂಕಷ್ಟಕ್ಕೆ ದೂಡಿದೆ.
ಸೋಂಕು ಸಂಖ್ಯೆ ನಿತ್ಯ ಏರಿಕೆಯಿಂದಾಗಿ ದೇಶದ ಆರೋಗ್ಯ ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ.ಆರೋಗ್ಯ ಸಿಬ್ಬಂಧಿ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ.ಕೇಂದ್ರ ,ರಾಜ್ಯ ಸರ್ಕಾರ ಕೈಚೆಲ್ಲಿ ಕುಳಿತಿರುವುದು ಸೋಂಕು ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿದೆ.
ಸೋಂಕು ಹೆಚ್ಚಳ ಹಿನ್ನೆಯಲ್ಲಿ ಯುಎಇ, ಕೆನಡಾ, ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳು ಭಾರತದಿಂದ ಬರುವ ವಿಮಾನಗಳ ಸಂಚಾರ ರದ್ದು ಮಾಡಿದೆ. ಇದರ ಜೊತೆಗೆ ನಿತ್ಯ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಏಷ್ಯಾದ ಅತಿ ದೊಡ್ಡ ಆರ್ಥಿಕತೆಯ ದೇಶ ಭಾರತ ಸೋಂಕಿನಿಂದ ನಲುಗುವಂತಾಗಿದೆ.
ದೇಶದಲ್ಲಿ ನಿತ್ಯ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ರೆಮಿಡಿಸಿವಿರ್ ಲಸಿಕೆ ಕೊರತೆ ಜೊತೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಹಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಸೋಂಕಿನ ಭೀಕರತೆಗೆ ಸಾಕ್ಷಿಯಾಗಿದೆ.
ಇಂದು ಬೆಳಗ್ಗೆ ೮ ಗಂಟೆಯ ತನಕ ದೇಶದಲ್ಲಿ ೩,೩೨,೭೩೦ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಅಮೇರಿಕಾ ನಂತರ ಸತತ ೩ ಲಕ್ಷ ಸೋಂಕಿನ ಗಡಿ ದಾಟಿದ ಎರಡನೇ ದೇಶ ಮತ್ತು ಒಂದೇ ದಿನ ಸೋಂಕು ಏರಿಕೆಯಲ್ಲಿ ಜಗತ್ತಿನಲ್ಲಿಯೇ ಮೊದಲ ಸ್ಥಾನ ಪಡೆದಿದೆ.
ಇಂದು ಸೋಂಕಿನಿಂದ ೨,೨೬೩ ಮಂದಿ ಸಾವನ್ನಪ್ಪಿದ್ದು, ೧,೯೩,೨೭೯ ಮಂದಿ ಆಸ್ಪತ್ರೆಯಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಹೊಸದಾಗಿ ಕಾಣಿಸಿಕೊಂಡ ಸೋಂಕಿನಿಂದ ದೇಶದಲ್ಲಿ ಇದುವರೆಗೆ ೧,೬೨,೬೩,೬೯೫ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ೧,೩೬,೪೮,೧೫೯ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.ಜೊತೆಗೆ ಇಲ್ಲಿಯ ತನಕ ಸೋಂಕಿನಿಂದ ೧,೮೬,೯೨೦ ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ,ಕೇರಳ, ತಮಿಳುನಾಡು ಮತ್ತು ಆಂದ್ರ ಪ್ರದೇಶದಲ್ಲಿ ಸೋಂಕಿನಿಂದ ಹೆಚ್ಚು ಮಂದಿ ಭಾದಿತರಾಗಿದ್ದಾರೆ.ಕೇರಳದಲ್ಲಿ ಒಂದೇ ದಿನ ೨೬,೯೯೫, ದೆಹಲಿಯಲ್ಲಿ ೨೬ ಸಾವಿರ, ಕರ್ನಾಟಕದಲ್ಲಿ ೨೫ ಸಾವಿರಕ್ಕೂ ಅಧಿಕ ಮಂದಿಗೆ ದಾಖಲೆಯ ಸೋಂಕು ಕಾಣಿಸಿಕೊಂಡಿದೆ.

೪ ರಾಜ್ಯದಲ್ಲಿ ಶೇ.೭೫ ರಷ್ಟು

ದೇಶದಲ್ಲಿ ೩.೩೨ ಲಕ್ಷ ಮಂದಿಗೆ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಈ ಪೈಕಿ ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ಗುಜರಾತ್‌ನಲ್ಲಿ ಒಟ್ಟಾರೆ ಸೋಂಕಿನ ಪೈಕಿ ಶೇ.೭೫ ರಷ್ಟು ಸೋಂಕು ನಾಲ್ಕು ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

೨೪ ಲಕ್ಷ ದಾಟಿದ ಸಕ್ರಿಯ ಪ್ರಕರಣ

ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.
ಸದ್ಯ ದೇಶದಲ್ಲಿ ೨೪,೨೮,೬೧೬ ಮಂದಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ನಿತ್ಯ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಇಲ್ಲಿಯವರೆಗೆ ೧೩,೫೪,೭೮,೪೨೦ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಇಲಾಖೆ ತಿಳಿಸಿದೆ.