ದೇವರು ಹೇಳುತ್ತಿದ್ದ ಮಹಿಳೆ ಕೊಲೆ: ಇಬ್ಬರು ಆರೋಪಿಗಳ ಬಂಧನ

ಕಲಬುರಗಿ,ನ.30-ಇಲ್ಲಿನ ಜೆ.ಆರ್.ನಗರದಲ್ಲಿ ಈಚೆಗೆ ನಡೆದ ದೇವರು ಹೇಳುತ್ತಿದ್ದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಬಾಳೆ ಲೇಔಟ್‍ನ ಶರ್ಪೋದ್ದಿನ್ ಅಲಿಯಾಸ್ ಶರ್ಪೋದ್ದಿನ್ ಗೌಳಿ ತಂದೆ ಅಬ್ದುಲ್ ಹಮೀದ್ ಶೇಖ್ (54) ಮತ್ತು ಬಸವರಾಜ ತಂದೆ ಮಡಿವಾಳಪ್ಪ ಬಿದನೂರ (34) ಎಂಬುವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಆಯುಧ ಜಪ್ತಿ ಮಾಡಿದ್ದಾರೆ.
ಇತ್ತೀಚೆಗೆ ಜೆ.ಆರ್.ನಗರದ ರತ್ನಾಬಾಯಿ ಗಂಡ ಮಡಿವಾಳಪ್ಪ ಬಿದನೂರ ಎಂಬ ದೇವರ ಹೇಳುತ್ತಿದ್ದ ಮಹಿಳೆಯನ್ನು ರುಬ್ಬುಗಲ್ಲಿನಿಂದ ಮುಖಕ್ಕೆ ಜಜ್ಜಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ರತ್ನಬಾಯಿ ಅವರ ಪುತ್ರಿ ಅನುಸುಬಾಯಿ ದತ್ತು ತಿವಾರಿ ಅವರು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತ ಚೇತನ್ ಆರ್, ಡಿಸಿಪಿ ಕನಿಕಾ ಸಿಕ್ರಿವಾಲ್, ಕಲಬುರಗಿ ದಕ್ಷಿಣ ಉಪ-ವಿಭಾಗದ ಎಸಿಪಿ ಭೂತೆಗೌಡ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆ ಪಿಐ ಕುಬೇರ ಎಸ್.ರಾಯಮಾನೆ ಅವರ ನೇತೃತ್ವದಲ್ಲಿ ಎಎಸ್‍ಐ ಮಲ್ಲಿಕಾರ್ಜುನ ಜಾನೆ, ಸಿಬ್ಬಂದಿಗಳಾದ ಸಿಕ್ರೇಶ್ವರ, ಉಮೇಶ, ಮುಜಾಹಿದ್ ಕೊತ್ವಾಲ್, ಅರೇಶ, ಆತ್ಮಕುಮಾರ ಮತ್ತು ಕರಣಕುಮಾರ ಅವರು ತನಿಖೆ ನಡೆಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಣ ಕೊಡುವುದಾಗಿ ಹೇಳಿ ಸುಳ್ಳು ಭರವಸೆ ನೀಡಿದ್ದಕ್ಕಾಗಿ ಮತ್ತು ಬೈಗುಳದಿಂದ ಬೇಸತ್ತು ಮಹಿಳೆಯನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.