ದೇವರಿಗೆ ಪೂಜೆ ವಿಚಾರ: ಎರಡು ಗುಂಪುಗಳ ಪ್ರತಿಭಟನೆ

ಮಧುಗಿರಿ, ಸೆ. ೨೫- ದೇವರಿಗೆ ಪೂಜೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಪ್ರತಿಭಟನೆ ನಡೆದ ಘಟನೆ ತಾಲ್ಲೂಕಿನ ದೊಡ್ಡೇರಿ ಹೋಬಳಿ ಪೂಜಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪೂಜಾರಹಳ್ಳಿ ಗ್ರಾಮದ ಶ್ರೀ ಅಮ್ಮಾಜಿ ಪೂಜಾರಳ್ಳಮ್ಮ ದೇವಾಲಯದ ಅರ್ಚಕರಾಗಿದ್ದ ಕವಣದಾಲ ಗ್ರಾಮದ ಕಾಮರಾಜು ಎಂಬುವರು ಕಳೆದ ನಾಲ್ಕು ವರ್ಷಗಳ ಹಿಂದೆ ಪೂಜೆ ಮಾಡುವುದಿಲ್ಲ ಎಂದು ಗ್ರಾಮಸ್ಥರಿಗೆ ತಿಳಿಸಿದ್ದರು. ನಂತರ ಊರಿನ ಗ್ರಾಮಸ್ಥರು ದೇವಸ್ಥಾನದ ಸಮಿತಿ ರಚಿಸಿಕೊಂಡು ಪರ್ಯಾಯವಾಗಿ ಮತ್ತೊಬ್ಬರನ್ನು ನೇಮಿಸಿಕೊಂಡು ಪೂಜಾ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಆದರೆ ನಂತರ ಇದೇ ಕಾಮರಾಜು ಉಚ್ಚ ನ್ಯಾಯಾಲಯದಲ್ಲಿ ಇದರ ಬಗ್ಗೆ ದಾವೆ ಹೂಡಿದ್ದರು.
ಇತ್ತೀಚೆಗೆ ನ್ಯಾಯಾಲಯದಿಂದ ಆದೇಶ ತಂದು ಮತ್ತೆ ಪೂಜೆ ಮಾಡಲು ಬಂದಿರುತ್ತಾರೆ. ಇದಕ್ಕೆ ಪೂಜಾರಹಳ್ಳಿ, ರಾಚಯ್ಯನಪಾಳ್ಯ, ಗುಣೇದಿಬ್ಬ, ಜವನಯ್ಯನಪಾಳ್ಯ, ಲಿಂಗಸಂದ್ರ ಸಂಜೀವಪುರ, ಓಬಳಿಹಳ್ಳಿ ಗ್ರಾಮದ ಭಕ್ತಾದಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ ನಂತರ ಕಾಮರಾಜು ನಾಲ್ಕು ದಿನಗಳಿಂದ ದೇವಸ್ಥಾನಕ್ಕೆ ಬೀಗ ಜಡಿದುಕೊಂಡು ಹೋಗಿರುತ್ತಾರೆ.
ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಆದೇಶ ಬರುವವರೆಗೂ ಬೆಳಿಗ್ಗೆ ಮತ್ತು ಸಂಜೆ ವೇಳೆ ದೇವರಿಗೆ ಪೂಜೆ ಮಾಡಬೇಕು. ಹಿಂದೂ ಧಾರ್ಮಿಕ ಭಾವನೆಗಳಿಗೆ ತೊಂದರೆ ನೀಡಬಾರದು ಎಂದು ಹೇಳಿದರೂ ಅರ್ಚಕ ಕಾಮರಾಜು ಕೇಳದೆ ದೇವಾಲಯಕ್ಕೆ ಬೀಗ ಹಾಕಿರುತ್ತಾರೆ. ಅಲ್ಲದೆ ಇವರು ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಮೇಲೆ ಅಸಭ್ಯ ವರ್ತನೆ ತೋರುತ್ತಿದ್ದು, ಗ್ರಾಮದಲ್ಲಿ ಅಶಾಂತಿ ವಾತಾವರಣ ಮೂಡಿಸುತ್ತಿದ್ದಾರೆ. ಇಂತಹವರಿಗೆ ಪೂಜೆ ಮಾಡಲು ಅವಕಾಶ ನೀಡಬಾರದು, ಸಮಿತಿಯಿಂದ ನೇಮಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಪೂಜೆ ಮಾಡುತ್ತಿರುವ ಅರ್ಚಕರನ್ನೇ ನೇಮಿಸಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪರಿಸ್ಥಿತಿಯ ಗಂಭೀರತೆ ಅರಿತ ತಹಶೀಲ್ದಾರ್ ವೈ. ರವಿ ಸ್ಥಳಕ್ಕೆ ಭೇಟಿ ನೀಡಿ ಎರಡೂ ಗುಂಪುಗಳ ಜತೆ ಮಾತನಾಡಿ ಮನವೊಲಿಸಿ ದೇವರ ಪೂಜೆಗೆ ಅವಕಾಶ ಕಲ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಬಡವನಹಳ್ಳಿ ಪಿಐ ಹನುಮಂತರಾಯಪ್ಪ, ಕಂದಾಯಧಿಕಾರಿ ಚನ್ನವೀರಪ್ಪ, ದೇವಸ್ಥಾನ ಸಮಿತಿಯ ಅಧ್ಯಕ್ಷ ಸೋಮಣ್ಣ, ಯಜಮಾನ ಸಿದ್ದಬೀರಪ್ಪ, ಗ್ರಾಮಸ್ಥರಾದ ರವಿಯಾದವ್, ರಮೇಶ್, ಹನುಮಂತರಾಜು, ಭಾಗ್ಯಮ್ಮ, ಯಶೋಧಮ್ಮ ಮತ್ತಿತರರು ಉಪಸ್ಥಿತರಿದ್ದರು.