ದೇವರಿಗಾಗಿ ಹುಡುಕಾಟ !!

ಕಲಬುರಗಿ,ಮಾ 6: ಕಸದಂತೆ ಅನಾಥವಾಗಿ ಬಿದ್ದಿರುವ ದೇವರ ಪಟ ( ಫೋಟೋ)ಗಳನ್ನು ಸಂಗ್ರಹಿಸಿ ಅವುಗಳ ಅಂಚು, ಗಾಜುಗಳನ್ನು ಬೇರ್ಪಡಿಸಿ, ದೇವರ ಚಿತ್ರಗಳನ್ನು ಮಣ್ಣಿಗೆ ಸೇರಿಸಿ ಗಿಡ ನೆಡುವ ಕಣ ಕಣದಲ್ಲೂ ಶಿವ ಕಾರ್ಯಕ್ರಮವನ್ನು ಅಫಜಲಪುರ ತಾಲೂಕಿನ ಕ್ಷೇತ್ರ ಘತ್ತರಗಿಯಲ್ಲಿ ಯುವಾಬ್ರಿಗೇಡ್ ಅಫಜಲಪುರ ವತಿಯಿಂದ ರವಿವಾರ ಹಮ್ಮಿಕೊಳ್ಳಲಾಯಿತು.
ಘತ್ತರಗಿ ಕ್ಷೇತ್ರದ ಭೀಮಾನದಿ ತೀರದ ಉದ್ದಕ್ಕೂ ಅಫಜಲಪುರ ಯುವಾಬ್ರಿಗೇಡ್ ಸಂಘಟನೆಯ ಯುವ ಕಾರ್ಯಕರ್ತರು ಬೆಳಗಿನಿಂದ ಇಂತಹ ದೇವರ ಫೋಟೋ ಸಂಗ್ರಹ ಕಾರ್ಯದಲ್ಲಿ ನಿರತರಾದರು.
ಭೀಮಾ ನದಿಯ ದಡದಲ್ಲಿ ಬಿಸಾಡಿರುವ ಸುಮಾರು 4000ಕ್ಕಿಂತ ಹೆಚ್ಚು ದೇವರ ಪಟಗಳನ್ನು ಸಂಗ್ರಹಿಸಿ, ನದಿಯ ದಡದಲ್ಲಿರುವ ಕೊಠಡಿಗಳಲ್ಲಿ ಸಂಗ್ರಹಿಸಿಡಲಾಯಿತು. ಬಹಳ ಕಾಲದ ವರೆಗೂ ನೆನಪಿನಲ್ಲಿ ಉಳಿಯುವಂತೆ ಮಾಡಿದ ಈ ಕಾರ್ಯಕ್ರಮ ಒಂದು ರೀತಿಯಲ್ಲಿ ಮೈಲುಗಲ್ಲೇ ಸರಿ.ಹಾಗೆಯೇ ಅಲ್ಲಿಯೇ ಮುಂದಿನ ರವಿವಾರ 12ನೇ ಮಾರ್ಚ ರಂದು ಈ ಪಟಗಳಿಗೆ ಕಾಯಕಲ್ಪ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.