ದೇವರಹಿಪ್ಪರಗಿ ತಾಲೂಕಿನ ನರೇಗಾ ಕಾಮಗಾರಿಗಳ ವೀಕ್ಷಿಸಿದ ಜಿ.ಪಂ. ಸಿಇಒ ರಿಷಿ ಆನಂದ

ವಿಜಯಪುರ,ಫೆ.25 :ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಶನಿವಾರ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ, ಸಾತಿಹಾಳ, ಕೋರವಾರ ಗ್ರಾಮ ಪಂಚಾಯತಿಯ ವಿವಿಧ ನರೇಗಾ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ದೇವರಹಿಪ್ಪರಗಿ ತಾಲೂಕಿನ ವಿವಿಧೆಡೆ ಭೇಟಿ ನೀಡಿದ ಅವರು, ಮಾರ್ಕಬ್ಬಿನಹಳ್ಳಿ ಗ್ರಾಮ ಪಂಚಾಯಿತಿಯ ರಸ್ತೆ ಬದಿಯಲ್ಲಿನ ಸಾಮಾಜಿಕ ಅರಣ್ಯ ಕಾಮಗಾರಿ ವೀಕ್ಷಣೆ ಮಾಡಿ, ಬೇಸಿಗೆ ಸಮಯದಲ್ಲಿ ಸಸಿಗಳಿಗೆ ನೀರಿನ ವ್ಯವಸ್ಥೆ ಮಾಡಿ ಸಸಿಗಳು ಹಾಳಾಗದಂತೆ ನೋಡಿಕೊಳ್ಳಬೇಕು. ಈ ವರ್ಷ 29 ಸಾವಿರ ಸಸಿ ನೀಡುವ ಗುರಿ ಸಾಧಿಸುವಂತೆ ಅವರು ಸೂಚನೆ ನೀಡಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ದಾಖಲಾತಿ, ಪೌಷ್ಟಿಕ ಆಹಾರ ಮತ್ತು ಶೌಚಾಲಯ ವ್ಯವಸ್ಥೆ ಕುರಿತು ಪರಿಶೀಲಿಸಿ, ಅಂಗನವಾಡಿಯಲ್ಲಿ ತಯಾರಿಸಿದ ಆಹಾರವನ್ನು ಖುದ್ದು ಊಟ ಮಾಡುವ ಮೂಲಕ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು.
ಅಂಗನವಾಡಿ ಕೇಂದ್ರ ಮೇಲ್ಚಾವಣಿ ದುರಸ್ತಿಗೊಳಿಸಬೇಕು. ಕಟ್ಟಡ ಮೇಲ್ಚಾವಣಿ ದುರಸ್ತಿ ಮತ್ತು ಶಾಲಾ ಕೊಠಡಿಯಲ್ಲಿ ಟ್ಯೂಬಲೈಟ್, ಪ್ಯಾನ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಸಾತಿಹಾಳ ಗ್ರಾಮ ಪಂಚಾಯತಿಯ ಬೈರವಾಡ ಗ್ರಾಮದ ಅಮೃತ ಸರೋವರಕ್ಕೆ ಭೇಟಿ ನೀಡಿ, ಕಾಮಗಾರಿಯ ಉಳಿದ ಸಣ್ಣಪುಟ್ಟ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಮೃತ್ ಸರೋವರ ಯೋಜನೆಯು ಬೇಸಿಗೆ ಸಮಯದಲ್ಲಿ ಗ್ರಾಮದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಒದಗಿಸುವುದು ಮುಖ್ಯವಾಗಿದೆ. ಆದ್ದರಿಂದ ಅಮೃತ ಸರೋವರದಲ್ಲಿರುವ ನೀರು ಕಲುಷಿತವಾಗದಂತೆ ಸುತ್ತ ಮುತ್ತಲಿನ ಆವರಣವನ್ನು ಸ್ವಚ್ಛವಾಗಿಡುವಂತೆ ಸೂಚಿಸಿದರು.
ಕೋರವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಲಧಾರೆ ಯೋಜನೆಯ ಕೋರವಾರ ಸ್ಟಾಕ್ ಯಾರ್ಡ್ ಕಾಮಗಾರಿ ವೀಕ್ಷಣೆ ಮಾಡಿ, ಮುದ್ದೇಬಿಹಾಳ, ದೇವರಹಿಪ್ಪರಗಿ, ಸಿಂದಗಿ ತಾಲೂಕಿಗೆ ಕುಡಿಯುವ ನೀರಿನ ಮಹತ್ವಿಕಾಂಕ್ಷಿ ಯೋಜನೆಯಾಗಿದ್ದು. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಭಿಯಂತರ ಮಂಜುನಾಥ ಸ್ವಾಮಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ರಾಮು ಅಗ್ನಿ, ಫರಿದಾ ಪಠಾಣ, ಶಾಂತಗೌಡ ನ್ಯಾಮಣ್ಣವರ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರು (ಗ್ರಾ.ಉ) ಶಿವಾನಂದ ಮೂಲಿಮನಿ ಮಾರ್ಕಬ್ಬಿನಹಳ್ಳಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ, ಎನ್ ಕತ್ತಿ, ಎಂ.ವೈ. ಮಲ್ಕಣ್ಣವರ, ವಲಯ ಅರಣ್ಯ ಅಧಿಕಾರಿ, ತಾಂತ್ರಿಕ ಸಂಯೋಜಕ ಶರಣಗೌಡ ಪಾಟೀಲ, ಸೋಹೇಬ ಮಾರಡಗಿ, ಅರ್ಷದ್ ಕೊಟ್ನಾಳ, ಮುರುಗೇಶ ಕಟ್ಟಿ, ಲಾಲಸಾಬ ವಾಲೀಕಾರ, ದಾವಲಸಾಬ ಮುಜಾವರ, ಐಇಸಿ ಸಂಯೋಜಕ ಸಿದ್ದು ಕಾಂಬಳೆ ಉಪಸ್ಥಿತರಿದ್ದರು.