ದೇವರಕಟ್ಟೆಯ ಸೇವಾದಾರರು ದೇವಳದ ದೊಡ್ಡ ಆಸ್ತಿ

ಪುತ್ತೂರು, ಮಾ.೨೮- ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಗೆ ಸಂಬಂಧಿಸಿ ೧೪೮ ದೇವರಕಟ್ಟೆಗಳಿದ್ದು ಈ ಎಲ್ಲಾ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಯುತ್ತದೆ. ಕಟ್ಟೆಪೂಜೆಯ ಸೇವಾದಾರರು ದೇವರ ದೊಡ್ಡ ಆಸ್ತಿ ಎಂದು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.

ಅವರು ಶನಿವಾರ ದೇವಾಲಯದ ಕಚೇರಿಯ ಸಭಾಂಗಣದಲ್ಲಿ ಜಾತ್ರಾ ಕಟ್ಟೆಪೂಜೆಯ ಸೇವಾದಾರರ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭ ಜಾತ್ರೆಯ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದ ಅವರು, ಹೊಸ ಕಟ್ಟೆಗಳಿಗೆ ಬೇಡಿಕೆ ಇದೆ. ಇದನ್ನು ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗುವುದು. ದೇವರು ಮನೆ ಬಾಗಿಲಿಗೆ ಬಂದು ಭಕ್ತರ ಪೂಜೆ ಸ್ವೀಕರಿಸುವ ಮತ್ತು ಇಷ್ಟೊಂದು ಸಂಖ್ಯೆಯಲ್ಲಿ ಜಾತ್ರಾ ಕಟ್ಟೆಗಳು ಇರುವ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೊಂದು ಇಲ್ಲ ಎಂದು ಅವರು ಹೇಳಿದರು.

ವ್ಯವಸ್ಥಾಪನಾ ಸಮಿತಿಯ ಸದಸ್ಯ ಶೇಖರ ನಾರಾವಿ, ಕಟ್ಟೆಪೂಜೆ ಸಮಿತಿ ಮತ್ತು ಕಟ್ಟೆಪೂಜೆ ಸೇವಾದಾರರು ಪಾಲಿಸಬೇಕಾದ ನಿಯಮಗಳ ಮಾಹಿತಿ ನೀಡಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಮಚಂದ್ರ ಕಾಮತ್ ಅವರು ಏ. ೪ರಂದು ದೇವಾಲಯದ ಪರಿಸರ ಮತ್ತು ಜಾತ್ರಾ ಗದ್ದೆಯಲ್ಲಿ ನಡೆಯುವ ಸ್ವಚ್ಛತಾ ಅಭಿಯಾನದ ಮಾಹಿತಿ ನೀಡಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಸುಧಾ ಎಸ್. ರಾವ್ ಅವರು ದೇವರ ಕಟ್ಟೆಗಳನ್ನು ಶ್ರದ್ಧಾಕೇಂದ್ರವಾಗಿ ಬೆಳೆಸುವ ಕುರಿತು ಹಾಗೂ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡುವ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವೇ.ಮೂ. ವಿ.ಎಸ್. ಭಟ್, ವೀಣಾ ವಿ.ಕೆ. ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಮದಾಸ್ ಗೌಡ ಎಸ್. ಸ್ವಾಗತಿಸಿ, ಸಮಿತಿಯ ಸದಸ್ಯ ಬಿ. ಐತ್ತಪ್ಪ ನಾಯ್ಕ್ ವಂದಿಸಿದರು.