ದೇವದುರ್ಗ ತಾಲೂಕು ಸಂಪೂರ್ಣ ಸ್ತಬ್ಧ!

 • ಸೆಮಿ ಲಾಕ್‌ಡೌನ್‌ಗೆ ಸ್ಪಂದಿಸಿದ ಸಾರ್ವಜನಿಕರು *ಪೊಲೀಸ್ ಸರ್ಪಗಾವಲು, ಅಲ್ಲಲ್ಲಿ ಲಾಠಿ ರುಚಿ
  ದೇವದುರ್ಗ.ಏ.೨೫-ಕೊರೊನಾ ಮಹಾಮಾರಿ ತಡೆಯಲು ಸರ್ಕಾರ ಶನಿವಾರ ಹಾಗೂ ಭಾನುವಾರ ಸೆಮಿ ಲಾಕ್‌ಡೌನ್ ಘೋಷಣೆ ಮಾಡಿದ ಹಿನ್ನೆಲೆ, ಭಾನುವಾರ ತಾಲೂಕು ಸಂಪೂರ್ಣವಾಗಿ ಸ್ತಬ್ಧವಾಗಿತ್ತು.
  ಲಾಕ್‌ಡೌನ್ ಬಗ್ಗೆ ಪುರಸಭೆ ಸಿಬ್ಬಂದಿ ಎರಡು ದಿನಗಳಿಂದ ಜಾಗೃತಿ ಮೂಡಿಸುತ್ತಿದ್ದರು. ಅಲ್ಲದೆ ಈ ಹಿಂದೆ ಅರ್ಧದಿನ ಲಾಕ್‌ಡೌನ್ ಮಾಡಿದ್ದರಿಂದ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ಮಾಹಿತಿ ಇತ್ತು. ಹೀಗಾಗಿ ಶನಿವಾರದ ಲಾಕ್‌ಡೌನ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಶುಕ್ರವಾರ ಮಧ್ಯಾಹ್ನದಿಂದಲೇ ಎಲ್ಲ ಅಂಗಡಿ ಮುಂಗಟ್ಟುಗಳು, ವ್ಯಾಪಾರಿ ಮಳಿಗೆಗಳು ಬಂದ್ ಮಾಡಲಾಗಿತ್ತು.
  ಶನಿವಾರ ಕೂಡ ಮುಂದುವರೆದಿದ್ದು, ಜನರಿಲ್ಲದೆ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮೆಡಿಕಲ್, ಆಸ್ಪತ್ರೆ ಹೊರತುಪಡಿಸಿ ಬಹುತೇಕ ವ್ಯಾಪಾರ ಬಂದ್ ಆಗಿತ್ತು. ಬೆಳಗ್ಗೆ ೬ ರಿಂದ ೯ ರವರೆಗೆ ಕಿರಾಣಿ ಅಂಗಡಿ, ತರಕಾರಿ, ಹಾಲು, ಪೆಟ್ರೋಲ್ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಒಂಬತ್ತರ ನಂತರ ಬಹುತೇಕ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿತ್ತು. ಅಲ್ಲಲ್ಲಿ ಓಪನ್ ಮಾಡಿದ್ದ ಮಳಿಗೆಗಳನ್ನು ಪುರಸಭೆ ಸಿಬ್ಬಂದಿ ಬಲವಂತವಾಗಿ ಬಂದ್ ಮಾಡಿಸಿ, ಮಾಲೀಕರಿಗೆ ದಂಡದ ಎಚ್ಚರಿಕೆ ನೀಡಿದರು.
  ಸೆಮಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ವಾರದ ಸಂತೆ ಸಂಪೂರ್ಣ ರದ್ದಾಯಿತು. ಹಿಂದಿನ ವಾರದ ಸಂತೆಗಳು ರದ್ದಾಗಿದ್ದರೂ ವ್ಯಾಪಾರಿಗಳು ಸಿರವಾರ ಕ್ರಾಸ್, ಹೊಸ ಬಸ್ ನಿಲ್ದಾಣ, ಮಿನಿ ವಿಧಾನಸೌಧ ಮುಂದೆ ಮಾರಾಟ ಮಾಡುತ್ತಿದ್ದರು. ಆದರೆ ಈ ಶನಿವಾರ ಯಾವುದೇ ವ್ಯಾಪಾರ ನಡೆಯಲಿಲ್ಲ. ಪೊಲೀಸರು ಈ ಮೊದಲೇ ಎಚ್ಚರಿಕೆ ನೀಡಿದ್ದರಿಂದ ವ್ಯಾಪಾರಿಗಳು ಹಾಗೂ ಜನರು ಮಾರುಕಟ್ಟೆಯತ್ತ ಮುಖ ಮಾಡಲಿಲ್ಲ. ಎಲ್ಲೆಡೆ ಪೊಲೀಸ್ ಕಾವಲು
  ಶನಿವಾರ ಹಾಗೂ ಭಾನುವಾರ ಸರ್ಕಾರ ಸೆಮಿ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಇದರ ಯಶಸ್ವಿಗೆ ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿ ಅವಿರತ ಶ್ರಮಿಸಿದರು.
  ಎಲ್ಲೆಡೆ ಪುರಸಭೆ ವಾಹನಗಳು ಸೈರನ್ ಹೊಡೆಯುತ್ತ ಸಂಚರಿಸಿದ್ದರಿಂದ ಜನರಿಗೆ ಎಚ್ಚರಿಕೆ ಗಂಟೆಯಾಗಿತ್ತು. ಇದಲ್ಲದೆ ಜೆಪಿ ಸರ್ಕಲ್, ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ, ಕಟಕರ ಕಟ್ಟೆ, ಬಸವೇಶ್ವರ ವೃತ್ತ ಸೇರಿ ವಿವಿಧಡೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಿಯಮ ಮೀರಿ ಹೊರಬಂದ ಜನರಿಗೆ ಎಚ್ಚರಿಕೆ ನೀಡಲಾಯಿತು. ಬೈಕ್ ಸವಾರರಿಗೆ ಅಲ್ಲಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದರು.

ಕೋಟ್….
ಸರ್ಕಾರದ ಆದೇಶ ಹಿನ್ನಲೆ ಶನಿವಾರ ಹಾಗೂ ಭಾನುವಾರ ಪಟ್ಟಣದಲ್ಲಿ ಸಂಪೂರ್ಣ ಬಂದ್ ಮಾಡಲಾಗಿದೆ. ಪ್ರತಿಯೊಂದು ವ್ಯಾಪಾರಿ ಮಳಿಗೆಗೆ ತೆರಳಿ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು. ಶನಿವಾರದ ಸಂತೆ ಬಂದ್ ಮಾಡುವ ಬಗ್ಗೆ ವ್ಯಾಪಾರಿಗಳಿಗೆ ಹಿಂದೆ ತಿಳಿಸಿದ್ದೆವು. ಹೀಗಾಗಿ ವ್ಯಾಪಾರಿಗಳು ಯಾರೂ ಅಂಗಡಿ-ಮುಂಗಟ್ಟು ತೆರೆದಿರಲಿಲ್ಲ. ಭಾನುವಾರವೂ ಕೂಡ ಇದೇ ರೀತಿ ಮುಂದುವರೆಯಲಿದೆ.
ಶರಣಪ್ಪ
ಪುರಸಭೆ ಮುಖ್ಯಾಧಿಕಾರಿ