ದೇವದುರ್ಗ:ಬಸವೇಶ್ವರ ಜಯಂತಿ ಸರಳ ಆಚರಣೆ

ದೇವದುರ್ಗ.ಮೇ.೧೫-ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ವಿಶ್ವಗುರು ಬಸವಣ್ಣನವರ ೮೮೮ ಜಯಂತಿಯನ್ನು ಜಿಲ್ಲಾಡಳಿತದ ಆದೇಶದಂತೆ ಸರಳವಾಗಿ ಆಚರಿಸಲಾಯಿತು.
ತಹಸೀಲ್ದಾರ್ ಮಧುರಾಜ್ ಯಾಳಗಿ, ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಬಸವೇಶ್ವರರು ಸಮಾಜದಲ್ಲಿರುವ ಜಾತಿ ಅಸಮಾನತೆ ವಿರುದ್ಧ ಹೋರಾಟ ಮಾಡಿ ಸಮಾನತೆಯ ತತ್ವವನ್ನು ಹುಟ್ಟುಹಾಕಿದರು. ಅಲ್ಲದೆ ಜಾತಿಭೇದ, ವರ್ಗ ಭೇದ ಹೋಗಲಾಡಿಸಲು ಶ್ರಮಿಸಿದರು. ಅವರ ಕಾಲದಲ್ಲಿ ಅನೇಕ ಶರಣರು ವಚನ ಸಾಹಿತ್ಯವನ್ನು ಸಮಾಜಕ್ಕೆ ಆದರ್ಶ ಮೌಲ್ಯಗಳ ಮೂಲಕ ಕೊಡುಗೆ ನೀಡಿದ್ದಾರೆ. ಶರಣರ ವಚನಗಳಲ್ಲಿ ಮಾನವೀಯ ಮೌಲ್ಯಗಳು ಒಳಗೊಂಡಿವೆ. ಪ್ರತಿಯೊಬ್ಬರೂ ಶರಣರ ಆದರ್ಶಗಳು, ವಚನ ಸಾಹಿತ್ಯವನ್ನು ನಮ್ಮ ಬದುಕಿಗೆ ಅಳವಡಿಸಿಕೊಳ್ಳುವುದು ಅಗತ್ಯವೆಂದರು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಸೀಲ್ದಾರ್ ಶ್ರೀನಿವಾಸ ಚಾಪಲ್, ಪ್ರಕಾಶ್ ಗೌಡ, ಶರಣಬಸವ, ರವಿ ಬಲ್ಲಿದ್, ಕಸಾಪ ತಾಲೂಕ ಮಾಜಿ ಅಧ್ಯಕ್ಷ ಎಚ್ ಶಿವರಾಜ್, ಗೌರವ ಕಾರ್ಯದರ್ಶಿ ಪ್ರಕಾಶ್ ಪಾಟೀಲ್ ಅಮರಾಪುರ, ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮರಿಯಪ್ಪ ಹಾಗೂ ಬಸವ ಕೇಂದ್ರದ ಪದಾಧಿಕಾರಿಗಳು ಇದ್ದರು.