ದೇವದುರ್ಗದಲ್ಲಿ ಕೊರೊನಾಘಾತ

ದೇವದುರ್ಗ.ಏ.೨೪-ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಗೆ ಹೊಸ ತಲೆನೋವು ಶುರುವಾಗಿದೆ. ಶುಕ್ರವಾರ ಒಂದೇ ದಿನ ೧೨೩ಕೇಸ್ ದಾಖಲಾಗಿದ್ದು, ಇದೇ ಮೊದಲ ಸಲ ಪಾಸಿಟಿವ್ ಕೇಸ್ ಶತಕ ಬಾರಿಸಿದೆ.
ಮಹಾನಗರಗಳಿಗೆ ಗುಳೆ ಹೋಗಿದ್ದ ಕೂಲಿಕಾರರು ದಿನೇದಿನೆ ಮರಳಿ ಬರುತ್ತಿದ್ದಾರೆ. ಪುಣೆ, ಗೋವಾ, ಮುಂಬೈ, ಹೈದರಾಬಾದ್ ಹಾಗೂ ಬೆಂಗಳೂರಿಗೆ ದುಡಿಯಲು ಹೋಗಿದ್ದ ತಾಂಡಾ, ದೊಡ್ಡಿ ಜನರು ವಾಪಸ್ ಬರುತ್ತಿದ್ದು, ಅಂಥವರಲ್ಲಿ ಸೋಂಕು ಹೆಚ್ಚಾಗಿ ಕಂಡಬರುತ್ತಿದೆ. ಈ ಹಿಂದೆ ಮಾಡುತ್ತಿದ್ದ ವಾಹನ ತಪಾಸಣೆ, ಕ್ವಾರಂಟೈನ್ ಕೇಂದ್ರ ಇಲ್ಲದ ಕಾರಣ ಸೋಂಕು ಹೆಚ್ಚಲು ಕಾರಣ ಎನ್ನವ ಆರೋಪ ಕೇಳಿಬರುತ್ತಿದೆ.
ಕಳೆದ ವರ್ಷ ದಾಖಲೆ ೧೪೫೦ಕ್ಕೂ ಹೆಚ್ಚು ಸೋಂಕು ದಾಖಲಾಗಿತ್ತು. ನಂತರ ಬಹುತೇಕರು ರೋಗದಿಂದ ಗುಣಮುಖರಾಗಿದ್ದರು. ಆದರೆ, ಜನವರಿ ನಂತರ ಕೇಸ್ ಹೆಚ್ಚುತ್ತ ಸಾಗಿದ್ದು, ಸದ್ಯ ಸುಮಾರು ೩೦೦ಕ್ಕೂ ಹೆಚ್ಚು ಸಕ್ರಿಯ ಕೇಸ್‌ಗಳಿವೆ. ಬಹುತೇಕರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್-೧೯ ಕೇಂದ್ರ ಆರಂಭಿಸಿದ್ದರೂ ಚಿಕಿತ್ಸೆ ನೀಡಲಾಗುತ್ತಿಲ್ಲ.
ತಾಲೂಕಿನಲ್ಲಿ ಮಂಗಳವಾರ ೧೨ಕೇಸ್ ಬಂದಿದ್ದರೆ, ಬುಧವಾರ ೩೨, ಗುರುವಾರ ೮೩ ಹಾಗೂ ಶುಕ್ರವಾರ ೧೨೩ ಕೇಸ್ ಪತ್ತೆಯಾಗಿವೆ. ಇದರ ಪ್ರಮಾಣ ಇನ್ನು ಹೆಚ್ಚಾಗುವ ಸಾಧ್ಯತೆಯಿದ್ದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಸದ್ಯ ಅರ್ಧ ಲಾಕ್‌ಡೌನ್ ಆರಂಭಿಸಿದ್ದು, ಇನ್ನಾದರೂ ಕೊರೊನಾ ಕಂಟ್ರೋಲ್ ಬರುತ್ತಾ ಎನ್ನುವುದು ಜನರ ಪ್ರಶ್ನೆಯಾಗಿದೆ.
ಕಳೆದ ವರ್ಷ ತಾಲೂಕನ್ನು ಬೆಂಬಿಡದೆ ಕಾಡಿದ ಮಹಾರಾಷ್ಟ್ರದ ನಂಜು ಈ ವರ್ಷ ಕೂಡ ಜೀವ ಹಿಂಡುತ್ತಿದೆ. ಪುಣೆ, ಮುಂಬೈಗೆ ದುಡಿಯಲು ಹೋಗಿದ್ದ ಜನರು ನಿತ್ಯ ಎರಡ್ಮೂರು ಗಾಡಿಗಳಲ್ಲಿ ಮರಳಿ ಬರುತ್ತಿದ್ದಾರೆ. ಇವರಿಗೆ ಯಾವುದೇ ತಪಾಸಣೆ ಮಾಡಿಸದ ಹಿನ್ನೆಲೆ, ಅವರಿಂದ ಬೇರೆಯವರಿಗೂ ಸೋಂಕು ತಗುಲುತ್ತಿದೆ. ಗುಳೆಯಿಂದ ಮರಳಿ ಬರುವವರಿಗೆ ಕಡ್ಡಾಯವಾಗಿ ತಪಾಸಣೆ ಮಾಡದ ಹಿನ್ನೆಲೆ ಸೋಕು ಹೆಚ್ಚಳಕ್ಕೆ ಕಾರಣವಾಗಿದೆ. ತಿಂಥಣಿ ಬ್ರಿಡ್ಜ್, ಹೂವಿನಹೆಡಗಿ ಸೇತುವೆ, ಗೂಗಲ್ ಬ್ರಿಡ್ಜ್ ಹಾಗೂ ರೈಲ್ವೆ ಮೂಲಕ ರಾಯಚೂರಿನಿಂದ ಕೂಲಿಕಾರರು ಗುಳೆಯಿಂದ ಮರಳಿ ಬರುತ್ತಿದ್ದಾರೆ.

ಕೋಟ್
ಕರೊನಾ ನಿಯಂತ್ರಣಕ್ಕೆ ಸರ್ಕಾರದ ಮಾನದಂಡ ಪ್ರಕಾರ ಲಾಕ್‌ಡೌನ್ ಜಾರಿಮಾಡಿದ್ದು, ಪಟ್ಟಣದ ಎಲ್ಲ ಅಂಗಡಿ ಮುಂಗುಟ್ಟುಗಳನ್ನು ಬಂದ್ ಮಾಡಿಸಲಾಗುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಶರಣಪ್ಪ, ಪುರಸಭೆ ಮುಖ್ಯಾಧಿಕಾರಿ