ದೇವದುರ್ಗ:ಕ್ಷಯ ಮುಕ್ತ ಭಾರತಕ್ಕೆ ಕೈಜೋಡಿಸಿ

ದೇವದುರ್ಗ.ಮಾ.೨೭-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರ ೨೦೨೫ರ ವೇಳೆಗೆ ಕ್ಷಯ ಮುಕ್ತ ಭಾರತ ನಿರ್ಮಾಣ ಗುರಿ ಹಾಕಿಕೊಂಡಿದ್ದು, ಇದಕ್ಕೆ ಸಾರ್ವಜನಿಕರು ಕೈಜೋಡಿಸುವ ಮೂಲಕ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಮಧುರಾಜ್ ಯಾಳಗಿ ಹೇಳಿದರು.
ಪಟ್ಟಣದ ಜಹೀರುದ್ದೀನ್ ಪಾಷಾ ಸರ್ಕಲ್‌ನಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕ್ಷಯ ಅರಿವಿಗಾಗಿ ಮಾನವ ಸರಪಳಿ ನಿರ್ಮಾಣ, ಜಾಗೃತಿ ಜಾಥಾ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಕ್ಷಯ ರೋಗಕ್ಕೆ ಇಂದು ಉತ್ತಮ ಚಿಕಿತ್ಸಾ ಸೌಲಭ್ಯವಿದ್ದು, ರೋಗಿಗಳು ಯಾವುದೇ ಭಯ ಪಡದೆ, ಆರೋಗ್ಯ ಇಲಾಖೆ ಸಲಹೆ ಸೂಚನೆ ಪಾಲಿಸಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಬನದೇಶ್ವರ ಮಾತನಾಡಿ, ಕ್ಷಯ ರೋಗಿಗಳನ್ನು ಸಾರ್ವಜನಿಕರು ಸಾಮಾನ್ಯ ಜನರಂತೆ ಕಂಡು, ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ರೋಗಕ್ಕೆ ಉಚಿತ ಸೌಲಭ್ಯವಿದ್ದು, ಪೋಷಣಾ ಅಭಿಯಾನ ಕೂಡ ಜಾರಿಗೊಳಿಸಲಾಗಿದೆ. ರೋಗ ನಿರ್ಮೂಲನೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕ್ಷಯ ರೋಗದಿಂದ ಗುಣಮುಖರಾದವರಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ನಂತರ ಉತ್ತಮ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ಸನ್ಮಾನಿಸಲಾಯಿತು. ಡಾ.ಆರ್.ಎಸ್.ಹುಲಿಮನಿ, ಡಾ.ನಾಗರಾಜ ತಾಳಿಕೋಟಿ, ಡಾ.ನಾಗರಾಜ ಮಲ್ಕಾಪುರಿ, ನಾಗೇಶ ಶಾವಿ, ಡಾ.ನಿರ್ಮಲಾ, ಕ್ಷಯ ಮೇಲ್ವಿಚಾರಕ ರವಿಶುಕ್ಲ, ಭೀಮೇಶ, ಮಹೇಶ, ವೀರೇಶ, ನಾಗರಾಜ, ಓಂಕಾರ, ಚನ್ನಬಸಯ್ಯ ಇತರರಿದ್ದರು.