ದೇವದಾಸಿ ಮಹಿಳೆಯರ ಪಿಂಚಣಿ5 ಸಾವಿರ ರೂಗೆ ಹೆಚ್ಚಿಸಲು ಮನವಿ 


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.14: ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ. ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನವನ್ನು 5 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಮುಖ್ಯ ಮಂತ್ರಿ‌ ಸಿದ್ದರಾಮಯ್ಯ ಅವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಕಳೆದ ಆರೇಳು ವರ್ಷಗಳಲ್ಲಿ ಅಗತ್ಯ ವಸ್ತುಗಳಲ್ಲಿ ಬೆಲೆ ಏರಿಕೆ, ಬರಗಾಲ, ಪ್ರವಾಹ, ಕರೋನಾ ಸಂಕಷ್ಟದಿಂದ ರಾಜ್ಯದ  ದೇವದಾಸಿ ಮಹಿಳೆಯರು, ಮತ್ತವರ ಕುಟುಂಬದ ಸದಸ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅದಕ್ಕಾಗಿ  ಮಾಸಿಕ ಸಹಾಯಧನವನ್ನು 1500 ರೂಗಳಿಂದ 3,000 ರೂಗಳಿಗೆ ಹೆಚ್ಚಿಸುವಂತೆ ತಾವು ಈ ಹಿಂದೆ ಮುಖ್ಯ ಮಂತ್ರಿಯಾಗಿದ್ದಲೂ ಮತ್ತು ಆನಂತರ ಬಂದ  ಕುಮಾರ ಸ್ವಾಮಿ,  ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರಿಗೂ ಮನವಿ ಸಲ್ಲಿಸಿ ಮಾತುಕತೆ ನಡೆಸಿತು,  ಚಳುವಳಿಯನ್ನು ಸಂಘಟಿಸಿ ಒತ್ತಾಯಿಸಿತು. ತಾವು ಸೇರಿದಂತೆ ಸಹಾಯಧನವನ್ನು ಹೆಚ್ಚಿಸುವುದಾಗಿ ಎಲ್ಕರೂ ಹೇಳಿದಿರಿ ಆದರೆ  ಮಾಡಲೇ ಇಲ್ಲ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಜನ ಸಂಖ್ಯೆಗನುಗುಣವಾಗಿ ಸುಮಾರು 30,000 ಕೋಟಿ ರೂಗಳಷ್ಠು ಅನುದಾನ ಬಿಡುಗಡೆಯಾಗುತ್ತಿದ್ದರೂ ನಮ್ಮಗಳ ಅನುದಾನವನ್ನು ಯಾಕೆ ಹಿಚ್ಚಿಸುತ್ತಿಲ್ಲವೆಂಬುದು ಯಕ್ಷ ಪ್ರಶ್ನೆಯಾಗಿದೆ.
ಈಗಲಾದರೂ ಬೆಲೆ ಏರಿಕೆಯನ್ನು ಪರಿಗಣಿಸಿ 5,000 ರೂಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಬೇಕೆಂದು ಮರಳಿ ಒತ್ತಾಯಿಸುತ್ತಿರುವುದಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.
ಕಳೆದ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಗಣತಿ ಪಟ್ಟಿಯಿಂದ ಹೊರಗಿರುವ ಮಹಿಳೆಯರ ಸೇರ್ಪಡೆಗೆ ಅನಗತ್ಯ ತಕರಾರು ತೆಗೆಯಲಾಗುತ್ತಿದೆ. ಅಪಮಾನಿತ ಮತ್ತು ದಮನಿತ ಮಕ್ಕಳ ಅದರಲ್ಲೂ ಪರಿತ್ಯಕ್ತ ಹೆಣ್ಣು ಮಕ್ಕಳ ಗಣತಿ ಮಾಡುವ ಕಾರ್ಯವನ್ನು ಕೈಗೊಳ್ಳದೇ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ಬೆಳೆಯಲು ಬಿಡಲಾಗುತ್ತಿದೆ.
ಹಿಂದಿನ ಬಿಜೆಪಿ ಸರಕಾರ ನಮಗೆ ನೀಡುತ್ತಿದ್ದ ಸಾಲ ಸೌಲಭ್ಯವನ್ನು ಕಡಿತ ಮಾಡಿ ವಂಚಿಸಿದೆ.  ಅದನ್ನು ಪುನರ್ ಜಾರಿಗೆ ತರಬೇಕು. ಎಲ್ಲಾ ದೇವದಾಸಿ ಮಹಿಳೆಯರ ಮಕ್ಕಳು  ಮದುವೆಯಾದಲ್ಲಿ ಪ್ರೋತ್ಸಾಹ ಧನ5 ಲಕ್ಷ ರೂ ನೀಡಬೇಕು.  ವ್ಯವಸಾಯದಲ್ಲಿ ತೊಡಗಲು ಇಚ್ಛಿಸುವ ಎಲ್ಲಾ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳಿಗೆ ತಲಾ 5 ಎಕರೆ ನೀರಾವರಿ ಜಮೀನು  ಉಚಿತವಾಗಿ ಒದಗಿಸಬೇಕು. ದೇವದಾಸಿ ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಉನ್ನತ ಹಂತದವರೆಗೆ ಉಚಿತವಾದ ಮತ್ತು ನೇರವಾದ ಪ್ರವೇಶಾವಕಾಶ ಒದಗಿಸಬೇಕು.
ವಿದ್ಯಾವಂತ ನಿರುದ್ಯೋಗಿಗಳಿಗೆ ಅವರು ಉದ್ಯೋಗ ಪಡೆಯುವವರೆಗೆ ತಲಾ 10,000 ರೂಗಳ ನಿರುದ್ಯೋಗ ಭತ್ಯೆ ನೀಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮಂಡಿಸಲಾಗಿದೆ.
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಸ್ವಾಮಿ, ಚಂದ್ರಕುಮಾರಿ, ಅಂಜಿನಮ್ಮ, ಹೆಚ್.ದುರ್ಗಮ್ಮ, ರೇಣುಕಮ್ಮ, ಮಾರೆಮ್ಮ, ಹನುಮಂತಮ್ಮ, ಭೀಮಕ್ಕ, ಈರಮ್ಮ, ತಿಪ್ಪಮ್ಮ, ಗಾದೆಮ್ಮ, ಜಡೆಮ್ಮ, ಮೊದಲಾದವರು ಮನವಿ ಸಲ್ಲಿಸಿದರು.