ದೇವದಾಸಿ ಮಹಿಳೆಯರಿಗೆ ಸೂಕ್ತ ಸೌಲಭ್ಯ ಕಲ್ಪಿಸಿ:ನ್ಯಾಯವಾದಿ ದಾನೇಶ ಅವಟಿ

(ಸಂಜೆವಾಣಿ ವಾರ್ತೆ)
ವಿಜಯಪುರ:ಆ.5: ಜೀವನ ಸಂಧ್ಯಾಕಾಲದಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ ಅಪಾರ ನೋವು ತೊಂದರೆ ಅನುಭವಿಸುವ ದೇವದಾಸಿ ಮಹಿಳೆಯರಿಗೆ ಸರಕಾರ ಸೂಕ್ತ ಸೌಲಭ್ಯ ಕಲ್ಪಿಸಲಿ ಎಂದು ನ್ಯಾಯವಾದಿ ದಾನೇಶ ಅವಟಿ ಆಗ್ರಹಿಸಿದರು.
ನಗರದ ಜಿಲ್ಲಾ ಪಂಚಾಯತಿ ಹತ್ತಿರ ಜಿಲ್ಲಾ ಪತ್ರಿಕಾ ಭವನದ ಸಭಾಂಗಣದಲ್ಲಿ ದೇವದಾಸಿ ಮಹಿಳೆಯರ ಹಾಗು ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಜೀವನದಲ್ಲಿ ಬಡತನ, ಅಜ್ಞಾನ, ಅನಕ್ಷರತೆ, ಮೂಢನಂಬಿಕೆ ಮುಂತಾದ ಕಾರಣಗಳಿಂದಾಗಿ ಅನಿಷ್ಠ ದೇವದಾಸಿ ಪದ್ದತಿಗೆ ಸಿಲುಕಿ ಪರಿತಪಿಸುವ ಮಹಿಳೆಯರು ಕೊನೆಗಾಲದಲ್ಲಿ ಕುಟುಂಬದವರ ಪ್ರೀತಿ, ಆರೈಕೆಯಿಂದ ವಂಚಿತರಾಗಿ ನಾನಾರೋಗಗಳಿಗೆ ತುತ್ತಾಗಿ ಒಂಟಿತನದಿಂದ ಮನೋವಿಕಲತೆಯಿಂದ ದೈಹಿಕ ತೊಂದರೆಯಿಂದ ಬಳಲುವರು. ಈ ಶೋಷಣೆಯಿಂದ ಅವರು ಹೊರಬರಲು ಸಂಕಲ್ಪ ಮಾಡಬೇಕಿದೆ. ಹಾಗೂ ಅವರ ಕುಟುಂಬ ವರ್ಗದ ಮಹಿಳೆಯರು ಮಕ್ಕಳು ಇಂತಹ ಅನಿಷ್ಟ ಪದ್ದತಿಗಳಿಗೆ ಬಲಿಯಾಗದಿರಲು ಸರಕಾರದ ಪ್ರಜ್ಞಾವಂತ ನಾಗರಿಕರ ಸಂಘ-ಸಂಸ್ಥೆಗಳ ಸಹಾಯ ಸಹಕಾರ ಪಡೆದು ಪುನರ್ವಸತಿ ಹೊಂದಬೇಕಿದೆ. ಇಲ್ಲದೆ ನಾನಾ ಕಾರಣಗಳಿಂದಾಗಿ ನಡೆಯುವ ಮುತ್ತು ಕಟ್ಟುವ ದೇವದಾಸಿ ವೇಶಾವಾಟಿಕೆ ಎಂತಹ ಅನಿಷ್ಟ ಪದ್ದತಿಗಳನ್ನು ಕೈಬಿಟ್ಟು ಸರಕಾರ ನೀಡಿದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ತನು ಫೌಂಡೇಶನ ಅಧ್ಯಕ್ಷ ವಿಜಯಕುಮಾರ ಕಾಶೆಟ್ಟಿ ಮಾತನಾಡಿ ಶತಶತಮಾನಗಳಿಂದ ಪುರುಷ ಪ್ರಧಾನ ಸಮಾಜ ಮಹಿಳೆಯರು ಮತ್ತುಮಕ್ಕಳ ಮೇಲೆ ನಿರಂತರ ನಾನಾ ರೀತಿ ದೌರ್ಜನ್ಯ ವೆಸಗುತ್ತ ಬಂದಿದ್ದು ತಮ್ಮ ಸ್ವಾರ್ಥಕ್ಕಾಗಿ ಮುತ್ತುಕಟ್ಟುವ ದೇವದಾಸಿ ಪದ್ದತಿ ವೇಶಾವಾಟಿಕೆಗಳಂತಹ ಅನಿಷ್ಟಗಳನ್ನು ಅಳವಡಿಸಿಕೊಂಡಿದ್ದಾರೆ. ಇದನ್ನು ತಡೆಗಟ್ಟಲು ಅನೇಕ ಕಾಯ್ದೆ ಕಾನೂನುಗಳಿದ್ದು ಸರಕಾರವು ಯೋಜನೆಗಳನ್ನು ರೂಪಿಸಿ ಶ್ರಮಿಸುತ್ತಿದ್ದರೂ ಇಂದಿನ ಆಧುನಿಕ ಯುಗದಲ್ಲೂ ತಮ್ಮ ಕರಾಳ ಮುಖವನ್ನು ನಾನಾ ರೀತಿಯಾಗಿ ಬಿಂಬಿಸುತ್ತಿದೆ ಈ ಅನಿಷ್ಟ ಪದ್ದತಿಯಿಂದ ಬಾದಿತ ಮಹಿಳೆಯರು ಶಿಕ್ಷಣ, ವೃತ್ತಿಕೌಶಲ್ಯ ಪಿಂಚಣಿ, ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ದೇವದಾಸಿ ಪುನರವಸತಿ ಯೋಜನೆಯ ಜಿಲ್ಲಾ ಸಂಯೋಜಕ ಆನಂದ ಅವರು ದೇವದಾಸಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಇರುವ ಹಲವಾರು ಯೋಜನೆಗಳ ಕುರಿತು ಮಾಹಿತಿ ನೀಡಿ ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಚಿಲ್ಡರನ್ ಆಫ್ ಇಂಡಿಯಾ ಪೌಂಡೇಶನ ಸಂಯೋಜಕಿ ಶಾಂತಾ ಬ್ಯಾಲ್ಯಾಳ ಕಾರ್ಯಕ್ರಮ ಆಯೋಜಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮೀ ನಾಯ್ಕೋಡಿ ಸ್ವಾಗತಿಸಿದರು. ರೂಪಾ ಕೋಳಿ ನಿರೂಪಿಸಿದರು. ಲಕ್ಷ್ಮೀ ಮೇಲಕೇರಿ ವಂದಿಸಿದರು.