ದೇವದಾಸಿ ಮಹಿಳೆಯರಿಗೆ ಐದು‌ಸಾವಿರ ಮಾಸಿಕ‌ ಸಹಾಯ ಧನಕ್ಕೆ‌ ಒತ್ತಾಯ

ದಾವಣಗೆರೆ.ಫೆ.೨೭: ಸಾಮಾಜಿಕ ದೌರ್ಜನ್ಯ, ಶೋಷಣೆಗೆ ತುತ್ತಾಗಿರುವ ದೇವದಾಸಿ ಮಹಿಳೆಯರಿಗೆ ಯಾವುದೇ ರೀತಿಯ ವಯೋಮಿತಿಯ ತಾರತಮ್ಯ ಮಾಡದೆ ಮಾಸಿಕ ಸಹಾಯಧನವನ್ನು ಐದು ಸಾವಿರ ರೂಪಾಯಿಗೆ ಹೆಚ್ಚಳ ಮಾಡ ಬೇಕು ಎಂದು ದೇವದಾಸಿ ಮಹಿಳೆಯರ ನಾಲ್ಕನೇ ರಾಜ್ಯ ಸಮ್ಮೇಳನ ಆಗ್ರಹಿಸಿದೆ.ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ  ಚನ್ನಗಿರಿ ವಿರುಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ೪ ನೇ ರಾಜ್ಯ ಸಮ್ಮೇಳನದಲ್ಲಿ ಬಾಳು ರಾಠೋಡ್ ನಿರ್ಣಯ ಮಂಡಿಸಿದರು. ಕೆ. ನಾಗರತ್ನಮ್ಮ ಅನುಮೋದಿಸಿದರು. ಸಮ್ಮೇಳನದಲ್ಲಿ ಭಾಗವಹಿಸಿದ್ದವರು ಮಾಸಿಕ ಸಹಾಯಧನ ಹೆಚ್ಚಳಕ್ಕೆ ಒತ್ತಾಯಿಸಿ ಘೋಷಣೆ ಮೊಳಗಿಸಿದರು.ಕಳೆದ ೫- ೬ವರ್ಷಗಳಿಂದ ದೇವದಾಸಿ ಮಹಿಳೆಯರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಲವು ಹಂತದ ಚಳವಳಿ ನಡೆಸುತ್ತಿದ್ದರೂ, ಮಂತ್ರಿಗಳು ಹಾಗೂ ಅಽಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರೂ, ರಾಜ್ಯ ಸರ್ಕಾರ ಯಾವುದೇ ಕ್ರಮ ಗಳನ್ನು  ಕೈಗೊಳ್ಳದಿರುವುದು. ಉದಾಸೀನದಿಂದ ಮಹಿಳೆಯರು ದೌರ್ಜನ್ಯದ ದೇವದಾಸಿ ಪದ್ಧತಿ ಯಲ್ಲಿಯೇ ನಲುಗಲು ಬಿಟ್ಟಿರುವುದು ತೀವ್ರ ಖಂಡನೀಯವಾಗಿದೆ. ಮಠ ಹಾಗೂ ದೇವಸ್ಥಾನಗಳಿಗೆ ನೂರಾರು ಕೋಟಿ ನೀಡುವ ಸರ್ಕಾರ ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನ ಹೆಚ್ಚಳವನ್ನು ನಿರಾಕರಿಸುತ್ತಿರುವುದು ಖೇದಕರವಾಗಿದೆ ಎಂದು ಸಮ್ಮೇಳನ ತೀವ್ರವಾಗಿ ಖಂಡಿಸಿತು.ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ನಡೆಗಳು,ವ್ಯಾಪಕವಾದ ಕರಭಾರ, ಬೆಲೆ ಏರಿಕೆ ಹಾಗೂ ಹಣದುಬ್ಬರಕ್ಕೆ ಕಾರಣವಾಗಿವೆ. ದೇವದಾಸಿ ಮಹಿಳೆಯರು ಮತ್ತು ದುರ್ಬಲರಿಗೆ ನೀಡುವ ಮಾಸಿಕ ಸಹಾಯಧನಗಳು ಕಳೆದ ಐದು ವರ್ಷಗಳ ಹಿಂದೆ ಎಷ್ಟು ಆಹಾರ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದವೋ ಈ ದಿನಗಳಲ್ಲಿ ಅದರ ಅರ್ಧದಷ್ಟನ್ನು  ಖರೀದಿಸುತ್ತಿಲ್ಲ. ಆ ಮೂಲಕ ನಿಜ ಮೌಲ್ಯವನ್ನು ಅದು ಕಳೆದು ಕೊಂಡಿವೆ. ಇದರಿಂದಾಗಿ ದೇವದಾಸಿ ಮಹಿಳೆಯರ ಬದುಕು ಅತ್ಯಂತ ದುರ್ಬರವಾಗಿದೆ ಎಂದು ಆತಂಕ ವ್ಯಕ್ತಪಡಿಸಿತು.೧೦ ಕೆಜಿ ಪಡಿತರ ಕಡಿತ ಮಾಡಿ ೫ ಕೆಜಿಗೆ ಇಳಿಸಲಾಗಿದೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯು ದೇವದಾಸಿ ಮಹಿಳೆಯರ ಹೈನುಗಾರಿಕೆಯ ಮತ್ತು ಆಹಾರದ ಹಕ್ಕುಗಳನ್ನು ಮೊಟಕು ಮಾಡಿದೆಯಲ್ಲದೇ ಅಪೌಷ್ಠಿಕತೆಯಿಂದ ಬಳಲುವ ಈ ಕುಟುಂಬಗಳಿಗೆ ಪರಂಪರೆಯಿಂದ ಸಿಗುತ್ತಿದ್ದ ಆಹಾರವೂ ದೊರೆಯದಂತೆ ಮಾಡಲಾಗಿದೆ.ಸಾಮಾಜಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಮಾಸಿಕ ಸಹಾಯಧನವನ್ನು ಹೆಚ್ಚಿಸುವುದು ದುರ್ಬಲರನ್ನು ರಕ್ಷಿಸುವ ಸರಕಾರ ಹೊಣೆಗಾರಿಕೆ. ಹಾಗಾಗಿ ಕೂಡಲೇ ಮಾಸಿಕ ಸಹಾಯಧನ ಹೆಚ್ಚಿಸಬೇಕು ಎಂದು ಒತ್ತಾಯಿಸ ಲಾಯಿತು. ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಟಿ.ವಿ. ರೇಣುಕಮ್ಮ, ಗೌರವ ಅಧ್ಯಕ್ಷ ಯು. ಬಸವರಾಜ್, ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ ಇತರರು ಇದ್ದರು.