ದೇವದಾಸಿತನ ದಿಕ್ಕರಿಸಿ ದಿಟ್ಟತನದ ಬದುಕು ಕಂಡುಕೊಂಡ ಮಹಿಳೆಗೆ ಜಿಲ್ಲಾ ಸಾಧಕಿ ಪ್ರಶಸ್ತಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.19 :- ಅರಿವಿಲ್ಲದ ವಯಸ್ಸಿನಲ್ಲಿ ಬಡತನದ ಕೂಪದಿಂದ ಹಿರಿಯರು ತಳ್ಳಿದ ದೇವದಾಸಿ ಪದ್ಧತಿಯನ್ನು ಸ್ನೇಹಸಂಸ್ಥೆಯ ಒಡನಾಟದ ಮೂಲಕ ದಿಕ್ಕರಿಸಿ ಸ್ವಾವಲಂಬನೆ ಜೀವನ ನಡೆಸುವ ಛಲದಿಂದ ನರೇಗಾದ ಕೂಲಿ ಕೆಲಸ ಮಾಡಿ ಈಗ ಗ್ರಾಮಪಂಚಾಯಿತಿ ಕಸ ವಿಲೇವಾರಿ ಲಘು ವಾಹನದ ಚಾಲಕಿಯಾಗಿ ಸ್ವಾವಲಂಬನೆ ಜೀವನ ನಡೆಸುವ ಮೊರಬ ಗ್ರಾಮದ ಬಿ. ಅಡಿವೆಮ್ಮ ಎನ್ನುವ ಸಾಧಕಿಗೆ ವಿಜಯನಗರ ಜಿಲ್ಲಾಡಳಿತ ಮಹಿಳಾ ದಿನಾಚರಣೆಯ ಅಂಗವಾಗಿ  ಜಿಲ್ಲಾ ಮಟ್ಟದ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದೆ.
ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮದ ಬಿ ಅಡಿವೆಮ್ಮ ಇವರು ತಮಗೆ ಅರಿವಿಲ್ಲದ ವಯಸ್ಸಿನಲ್ಲಿ ಹಿರಿಯರ ತಪ್ಪಿನಿಂದ  ದೇವದಾಸಿ ಎನ್ನುವ ಅನಿಷ್ಟ ಪದ್ಧತಿ ಕೂಪಕ್ಕೆ ಬಿದ್ದಿದ್ದು ನಂತರ  ಯೋಚನಾ ಶಕ್ತಿ ಬಂದಾಗ ಅನಿಷ್ಟ ಪದ್ಧತಿಗೆ ತಿಲಾಂಜಲಿ ಇಡಬೇಕೆಂಬ ದೃಷ್ಟಿಯಲ್ಲಿ ಸ್ನೇಹಸಂಸ್ಥೆ ಹಾಗೂ ಇತರೆ ಸಂಘಸಂಸ್ಥೆಗಳ ಮೂಲಕ ಸಂಘಟಿತಳಾಗಿ ದೇವದಾಸಿ ಮಹಿಳೆಯರನ್ನು  ಸಂಘಟಿಸಿ ಸ್ವಸಹಾಯ ಗುಂಪು ಕಟ್ಟಿ ದೇವದಾಸಿ ಪದ್ಧತಿ ವಿಮುಕ್ತಿಗೊಳಿಸುವ ನಿಟ್ಟಿನಲ್ಲಿ ಹಾಗೂ ಕೂಲಿ ಮಾಡಿಯಾದರೂ ಬದುಕೋಣ ಆದರೆ ಅನಿಷ್ಟ ದೇವದಾಸಿ ಪದ್ಧತಿ ತೊಲಗಿಸೋಣ ಎನ್ನುವ ನಿಟ್ಟಿನಲ್ಲಿ ನರೇಗಾ ಕೆಲಸ ಮಾಡಿ ಕೂಲಿ ಹಣದಲ್ಲಿ  ಜೀವನ ಮಾಡಿ ಬದುಕಿದ ಅಡಿವೆಮ್ಮ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಈಗ ಮೊರಬ ಗ್ರಾಮಪಂಚಾಯಿತಿಯ ಕಸ ವಿಲೇವಾರಿ ವಾಹನದಲ್ಲಿ ಚಾಲಕಿಯಾಗಿ ಛಲದಿಂದ ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಬನೆ ಜೀವನ ನಡೆಸುವ ಅಡಿವೆಮ್ಮ ಮತ್ತೊಬ್ಬ ದೇವದಾಸಿ ಮಹಿಳೆಯರಿಗೆ ಸ್ಫೂರ್ತಿದಾಯಕರಾಗಿರುವ ಅವರನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೊಸಪೇಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಮಹಿಳಾ ಸಾಧಕಿ ಎಂದು ಗುರುತಿಸಿದ ವಿಜಯನಗರ ಜಿಲ್ಲಾಡಳಿತ ಇತ್ತೀಚಿಗೆ ಸನ್ಮಾನಿಸಿ ಗೌರವಿಸಿದೆ
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಜಿಲ್ಲಾಧಿಕಾರಿ ದಿವಾಕರ್,ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ,ಕೂಡ್ಲಿಗಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಾಗನಗೌಡ ಹಾಗೂ ಸಿಬ್ಬಂದಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.