ದೇವತಾ ಶಾಸ್ತ್ರವು ಬ್ರಹ್ಮವಿದ್ಯೆ: ಡಾ. ಶ್ರೀನಿವಾಸ್ ಸಿರನೂರಕರ್

ಕಲಬುರಗಿ:ನ.14:ದೇವತಾ ಶಾಸ್ತ್ರವು (ಥಿಯಾಸಫಿಯು) ಬ್ರಹ್ಮ ವಿದ್ಯೆಯಾಗಿದ್ದು ಆಧ್ಯಾತ್ಮಿಕ ಬಲದಿಂದ ಬ್ರಹ್ಮಾಂಡದ ರಹಸ್ಯವನ್ನು ಅರಿಯವುದೇ ಅದರ ಮುಖ್ಯ ಉದ್ದೇಶವಾಗಿದೆ ಎಂದು ಖ್ಯಾತ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಡಾ. ಶ್ರೀನಿವಾಸ್ ಸಿರನೂರಕರ್ ಅವರು ಹೇಳಿದರು.
ಥಿಯಾಸಪಿ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಪ್ರೊ. ವೀರಣ್ಣ ಪಡಶೆಟ್ಟಿ ಅವರ ನುಡಿ-ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವತಾ ಶಾಸ್ತ್ರದ ಸಿದ್ದಾಂತವನ್ನು ಪ್ರಚುರಪಡಿಸುವುದು ಇಂದಿನ ವಿಷಮ ಪರಿಸ್ಥಿತಿಯಲ್ಲಿ ಹಿಂದೆಂದಿಗಿಂತಲೂ ಅತ್ಯಗತ್ಯವಾಗಿದೆ ಎಂದರು.
ದೇವತಾ ಶಾಸ್ತ್ರವು ಜಾತಿ, ಕುಲ, ವರ್ಣ ಬೇದವನ್ನು ಎಣಿಸದೇ ಅತ್ಯಂತ ಉತ್ತಮವಾದ ಜಾತ್ಯಾತೀತತೆಯ ಸಿದ್ದಾಂತವಾಗಿದ್ದು, ಜನಾಂಗದಲ್ಲಿ ಸೋದರ ಭಾವವೂ ಉಂಟು ಮಾಡುವುದು ಅದರ ಮೂಲ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
ತುಲನಾತ್ಮಕ ಜ್ಞಾನ, ಮತ ಮತ್ತು ತತ್ವಶಾಸ್ತ್ರಗಳ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವ ಸೊಸೈಟಿ ರಹಸ್ಯವಾದ ಪ್ರಕೃತಿ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಶೋಧಿಸುವ ಮತ್ತು ಮಾನವನಲ್ಲಿರುವ ಸೂಪ್ತಶಕ್ತಿಗಳನ್ನು ಪರಿಶೋಧಿಸುವ ಮತ್ತು ಪ್ರಚೋದಿಸುವ ಕಾರ್ಯವನ್ನು ಸದಾ ಮಾಡುತ್ತದೆ ಎಂದು ಅವರು ತಿಳಿಸಿದರು.
ಥಿಯಾಸಫಿಕಲ್ ಸೊಸೈಟಿಯನ್ನು ಮೂರು ದಶಕಗಳಿಂದ ಜಿಲ್ಲೆಯಲ್ಲಿ ಜೀವಂತವಾಗಿರಿಸಿದ ದಿ. ವೀರಣ್ಣ ಪಡಶೆಟ್ಟಿ ಅವರ ಬದ್ಧತೆಯನ್ನು ಅವರ ಶ್ರಮವನ್ನು ಪ್ರಶಂಸಿದ ಸೊಸೈಟಿಯ ಹಿರಿಯ ಸದಸ್ಯರೂ ಆದ ಡಾ. ಸಿರನೂರಕರ್ ಸೊಸೈಟಿಯನ್ನು ಇನ್ನೂ ಕ್ರಿಯಾಶೀಲಗೊಳಿಸಿ ವಿಸ್ತರಿಸುವ ಅಗತ್ಯತೆಯ ಕುರಿತು ಒತ್ತಿ ಹೇಳಿದರು.
ಖ್ಯಾತ ವೈದ್ಯ ಡಾ. ಚನ್ನಬಸವರಾಜ್ ಪಡಶೆಟ್ಟಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸೊಸೈಟಿ ಹಂಗಾಮಿ ಕಾರ್ಯದರ್ಶಿ ವಿನೋದಕುಮಾರ್ ಜೇನೆವರಿ ಅವರು ಮಾತನಾಡಿ, ಸೊಸೈಟಿ ಘಟಕವನ್ನು ಆದಷ್ಟು ಶೀಘ್ರ ಪುನರರಚಿಸಿ ಕ್ರಿಯಾಶೀಲವನ್ನಾಗಿ ಮಾಡಲಾಗುವುದೆಂದು ತಿಳಿಸಿದರು. ಶಿವರಾಜ್ ಅಂಡಗಿ ಅವರು ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಪಡಶೆಟ್ಟಿ ಅವರು ವಂದಿಸಿದರು. ಕಾಂiÀರ್iಕ್ರಮದಲ್ಲಿ ಶ್ರೀಮತಿ ಶಾಂತಾದೇವಿ ಪಡಶೆಟ್ಟಿ, ರಾಘವೇಂದ್ರ ರಾಜಪುರೋಹಿತ್, ಡಾ. ಮಹಾನಂದಾ ಪಡಶೆಟ್ಟಿ, ಡಾ. ವೈಭವ್ ಪಡಶೆಟ್ಟಿ, ಇಂಜಿನಿಯರ್ ಶುಭಂ ಪಡಶೆಟ್ಟಿ, ಶ್ರೀಮತಿ ಸುನಂದಾ ಪಡಶೆಟ್ಟಿ, ಶರಣಪ್ರಸಾದ್ ಜೇನೆವರಿ, ರಾಜು ಕೋಷ್ಠಿ, ಕುಮಾರ್ ಚೇತನ್, ಕುಮಾರಿ ದಿವ್ಯಾ ಮುಂತಾದವರು ಉಪಸ್ಥಿತರಿದ್ದರು.