ದೇವಗೌಡರೆ ಅವಕಾಶ ರಾಜಕಾರಣಿ ಟೀಕೆಗೆ ಗುರಿಯಾಗಬೇಡಿ: ಈಶ್ವರಪ್ಪ

ಮೈಸೂರು, ಡಿ.1:- ಜಿ.ಟಿ.ದೇವಗೌಡರೆ ನೀವು ಕಾಂಗ್ರೆಸ್ ಪಕ್ಷವನ್ನು ಸೇರಿ ಅವಕಾಶ ರಾಜಕಾರಣಿ ಎಂಬ ಟೀಕೆಗೆ ಗುರಿಯಾಗಬೇಡಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನವರು ಎಚ್ಚರಿಸಿದರು.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾವು ನಮ್ಮ ಪಕ್ಷದಿಂದ ಹಿಂದುಳಿದವರು ಮತ್ತಿ ಒಬಿಸಿ ಗಳ ಕಲ್ಯಾಣ ದೃಷ್ಠಿಯಿಂದ ಒಬಿಸಿ ಸಮಾವೇಶಗಳನ್ನು ಮಾಡುತ್ತಿದ್ದೇವೆ, ನಾವು ನಮ್ಮ ಪಕ್ಷದ ಕಾರ್ಯಕರ್ತರನ್ನು ಸಂಘಟನೆಯನ್ನು ಮಾಡಿದ್ದೇವೆ. ನಾವು ಹೋದ ಕಡೆ ನಮ್ಮ ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಬರುತ್ತಿದ್ದಾರೆ. ಹುಬ್ಬಳ್ಳಿ, ಧಾರವಾಡ, ದಾವಣೆಗೆರೆ, ಕಲುಬುರಗಿ ಎಲ್ಲ ಕಡೆ ಯಶಸ್ವಿಯಾಗಿ ಸಮಾವೇಶಗಳನ್ನು ಮುಗಿಸಿಕೊಂಡು ಇಂದು ಮೈಸೂರಿಗೆ ಬಂದಿದ್ದೇವೆ ಎಂದರು.
ನಮ್ಮ ಹಿಂದುಳಿದ ಮತ್ತು ಒಬಿಸಿ ಜನರು ಕಾಂಗ್ರೆಸ್ ನವರಿಗೆ ಮತ ನೀಡಿ ಅವರನ್ನು ಗೆಲ್ಲಿಸಿ 70 ವರ್ಷ ಆಡಳಿತ ಮಾಡಲು ಅವಕಾಶ ಕೊಟ್ಟಿದ್ದೀರಿ, ಆದರೆ ಅವರು ಏನು ಮಾಡಲಿಲ್ಲ ಅಂತ ಅವರನ್ನು ಹಿಂದೆ ಸರಿಸಿದ್ದಾರೆ. ಈಗ ನಮ್ಮ ಪಕ್ಷವನ್ನು ನಂಬಿ ಬರುತ್ತಿದ್ದಾರೆ ಆದ್ದರಿಂದ ನಾವು ನಮ್ಮ ಪಕ್ಷದಿಂದ ಹಿಂದುಳಿದವರಿಗೆ ಮತ್ತು ಒಬಿಸಿ ಜನರಿಗೆ ಏನು ಬೇಕೋ ಅದನ್ನು ಮಾಡಲು ಸಿದ್ಧರಿದ್ದೇವೆ. ಅವರ ಏಳಿಗೆಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.
ನಿನ್ನೆ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಗಳನ್ನು ಭೇಟಿ ಮಾಡಿರುವುದರ ಕುರಿತು ಪ್ರತಿಕ್ರಿಯಿಸಿ ಎಲ್ಲ ಪಕ್ಷಗಳು ಇರುವುದು ದೇಶದ ಒಳಿತಿಗಾಗಿ, ಯಾವುದೇ ರೀತಿಯ ಕಚ್ಚಾಡುವುದಕ್ಕಲ್ಲ, ದೇವೇಗೌಡರ ಮತ್ತು ಪ್ರಧಾನಿಗಳ ಭೇಟಿ ಇದಕ್ಕೆ ಒಂದು ನಿದರ್ಶನವಾಗಿದೆ ಎಂದು ಹೇಳಿದರು.
ಜಾತಿ ಜನಗಣತಿ ಕುರಿತು ಪ್ರತಿಕ್ರಿಯಿಸಿ ಸಿದ್ದರಾಮಯ್ಯನವರು ಅವರ ಅಧಿಕಾರದ ಅವಧಿಯಲ್ಲಿ ಬಾರಿ ಉತ್ಸಾಹದಿಂದ ಜಾತಿ ಜನಗಣತಿಯನ್ನು ಮಾಡಿಸುತ್ತೇನೆ ಎಂದು ಹೇಳಿ ಹಣವನ್ನು ಸಹ ಬಿಡುಗಡೆ ಮಾಡಿ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಒಂದು ತಂಡವನ್ನು ಕೂಡ ಮಾಡಿದ್ದರು. ಆಗ ನಾನು ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿದ್ದೆ, ನಾನು ಯಾವಾಗ ಇದೆಲ್ಲ ನಡೆಯುತ್ತದೆ ಮತ್ತು ಅದರ ವರದಿ ಯಾವಾಗ ಬಿಡುಗಡೆ ಮಾಡುತ್ತೀರ ಎಂದು ಕೇಳಿದ್ದೆ. ಆದರೆ ಜಾತಿ ಜನ ಗಣತಿ ವರದಿ ಇನ್ನೂ ಬಿಡುಗಡೆ ಮಾಡಿಲ್ಲ. ಕೇಳಿದರೆ ಬೇಜಾವಬ್ದಾರಿ ಉತ್ತರಗಳನ್ನು ನೀಡುತ್ತಾರೆ. ಅದಕ್ಕೆ ವರದಿ ಮಾಡಿರುವ ಕಾರ್ಯದರ್ಶಿಯ ಸಹಿ ಮಾಡಿಲ್ಲ. ಸಿದ್ದರಾಮಯ್ಯನವರೇ ನೀವು ಸುಳ್ಳುಗಳನ್ನು ಹೇಳಿದರೆ ಯಾರೂ ನಂಬುವುದಿಲ್ಲ. ಕಾರ್ಯದರ್ಶಿ ಜಯಪ್ರಕಾಶ್ ಅವರ ಬಳಿ ಮನವಿ ಮಾಡಿ ಸಹಿ ಹಾಕಿಸಿ ಜಾತಿ ಜನಗಣತಿಯ ವರದಿಯನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ಜಿ.ಟಿ ದೇವೆಗೌಡ ಮತ್ತು ಸಿದ್ದರಾಮಯ್ಯ ನವರು ಒಂದಾಗಿರುವುದ ಕುರಿತು ಪ್ರತಿಕ್ರಿಯಿಸಿ ಮೊದಲೆಲ್ಲ ಜಿ.ಟಿ.ದೇವೇಗೌಡ ಸಿದ್ದರಾಮಯ್ಯನವರನ್ನು ಸೋಲಿಸಲು ನಮಗೆ ಸಹಾಯ ಮಾಡುತ್ತಿದ್ದರು. ಆದರೆ ಈಗ ಅವಕಾಶಕ್ಕಾಗಿ ಕಾಂಗ್ರೆಸ್ ಅನ್ನು ಸೇರಿಕೊಳ್ಳುತ್ತಿದ್ದಾರೆ. ನೀವು ಅವಕಾಶವಾದಿ ರಾಜಕಾರಣಿ ಎಂಬ ಟೀಕೆಗೆ ಗುರಿಯಾಗ ಬೇಡಿ ಎಂದು ಜಿ.ಟಿ ದೇವೇಗೌಡರಿಗೆ ಸಲಹೆ ನೀಡಿದರು.