ದೆಹಲಿ ಹೋರಾಟ ನಿಲ್ಲುವುದಿಲ್ಲ’ : ರಾಕೇಶ್ ಟಿಕಾಯತ್ ಸ್ಪಷ್ಟನೆ*

ಶಿವಮೊಗ್ಗ, ಮಾ. 21: ‘ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿ ಬಳಿ ರೈತರು ನಡೆಸುತ್ತಿರುವ ಹೋರಾಟ ಜೂನ್ ವೇಳೆಗೆ ನಿಲ್ಲಬಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಆದರೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ. ಬೇಡಿಕೆ ಈಡೇರುವವರೆಗೂ ಮುಂದುವರಿಯಲಿದೆ’ ಎಂದು ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕ ರಾಕೇಶ್ ಟೀಕಾಯತ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸುವ ಕಾನೂನು ಜಾರಿಯ ಜೊತೆಗೆ, ಪ್ರಸ್ತುತ ಜಾರಿಗೆ ತಂದಿರುವ ಮೂರು ಕೃಷಿ ಕಾನೂನು ರದ್ದುಗೊಳಿಸಬೇಕು. ಯಾವುದೇ ಕಾರಣಕ್ಕೂ ಈ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದ ದೆಹಲಿ ಬಳಿ ನಿರಂತರವಾಗಿ ನಡೆಸುತ್ತಿರುವ ಹೋರಾಟ ಮುಂದುವರಿಸಲಿದ್ದೆವೆ ಎಂದರು.ಹಸಿವಿನ ವ್ಯಾಪಾರ ನಡೆಯಬಾರದು. ರೊಟ್ಟಿಯನ್ನು ಮಾರುಕಟ್ಟೆಯಲ್ಲಿ‌ ಕೊಂಡು ತರುವಂತಹ ಸ್ಥಿತಿ ನಿರ್ಮಾಣವಾಗಬಾರದು. ಆಹಾರ ವಸ್ತುಗಳನ್ನು ಗೋದಾಮಿನಲ್ಲಿ ಇಡುವಂತಾಗಬಾರದು. ಕಾರ್ಮಿಕರ ಹಕ್ಕುಗಳನ್ನು ರಕ್ಷಣೆ ಮಾಡಲಾಗುತ್ತಿಲ್ಲ. ಅವರ ಶೋಷಣೆಯಾಗುತ್ತಿದೆ . ಇದಕ್ಕಾಗಿ ಕಾನೂನನ್ನೇ ಬದಲಾವಣೆ ಮಾಡಲಾಗುತ್ತಿದೆ. ಕೃಷಿಯ ಕುರಿತು ಹಲವು ವಿರೋಧಿ ಕಾನೂನು ಜಾರಿ ಮಾಡಲಾಗುತ್ತಿದೆ. ಇದೆಲ್ಲಾ ರೈತರಿಗೆ ಹಾನಿಯನ್ನುಂಟು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮತ್ತೋರ್ವ ಮುಖಂಡ ಯದುವೀರ್ ಸಿಂಗ್’ರವರು ಮಾತನಾಡಿ, ಇದು ಕೇವಲ ರೈತ ಹೋರಾಟ ವಲ್ಲ. ವಿವಿಧ ಕ್ಷೇತ್ರಗಳಲ್ಲಿ ನ ಶೋಷಿತರ ಪರವಾದ ಹೋರಾಟವಾಗಿದೆ ಎಂದರು‌.ಇಬ್ಬರ ಹಿಡಿತದಲ್ಲಿರುವ ಕೇಂದ್ರ ಸರ್ಕಾರವು, ಹೋರಾಟ ಹತ್ತಿಕ್ಕುವ ಹುನ್ನಾರ ನಡೆಸಿಕೊಂಡು ಬರುತ್ತಿದೆ. ಉದ್ಯಮಿ ಅದಾನಿಯು 8 ಲಕ್ಷ ಟನ್ ಆಹಾರ ಸಾಮಗ್ರಿ ದಾಸ್ತಾನು ಸಾಮರ್ಥ್ಯ ದ ಗೋದಾಮು ನಿರ್ಮಿಸಿದ್ದಾರೆ. ಕೇಂದ್ರ ಸರ್ಕಾರವು 20 ಕ್ಕೂ ಅಧಿಕ ಕ್ಷೇತ್ರ ಗಳನ್ನು ಖಾಸಗೀಕರಣಗೊಳಿಸಿದೆ. ಆಹಾರವನ್ನು ತಿಜೋರಿಯಲ್ಲಿರಿಸುವ ಮೂಲಕ ಆಹಾರ ಕ್ಷೇತ್ರ ಖಾಸಗೀಕರಣಕ್ಕೆ, ಉದ್ಯಮಿಗಳ ವಶಕ್ಕೆ ನೀಡು ಮುಂದಾಗಿದೆ ಎಂದು ದೂರಿದರು.
ಮಾಧ್ಯಮವು ಪ್ರಜಾಪ್ರಭುತ್ವದ ಆಧಾರ ಸ್ಥಂಭವಾಗಿದೆ. ರೈತರ ಹೋರಾಟದ ಬಗ್ಗೆ ಬರೆದ ಪತ್ರಕರ್ತರನ್ನು ಬಂಧಿಸಲಾಗುತ್ತಿದೆ. ಹೆದರಿಸಿ ಮಾಧ್ಯಮ ನಿಯಂತ್ರಣಕ್ಕೆ ಷಡ್ಯಂತ್ರ ನಡೆಸಲಾಗುತ್ತಿದೆ  ಎಂದು ಆರೋಪಿಸಿದರು.