ದೆಹಲಿ ಹೈಕೋರ್ಟ್ ಸಲಿಂಗಿ ಜಡ್ಜ್ ನೇಮಕ

ನವದೆಹಲಿ, ನ.೧೬- ದೇಶದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಕೋರ್ಟ್‌ಗೆ ತಾನು ಸಲಿಂಗಿ ಎಂದು ಘೋಷಿಸಿಕೊಂಡಿರುವ ವ್ಯಕ್ತಿಯೊಬ್ಬರು ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೆ.
ಹಿರಿಯ ನ್ಯಾಯವಾದಿ ಸೌರಭ್ ಕೃಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿರುವ ಹಿನ್ನೆಲೆ ಶೀಘ್ರದಲ್ಲೇ ನ್ಯಾಯಮೂರ್ತಿಯಾಗುವ ಆದೇಶ ಹೊರಬೀಳಲಿದೆ.
ಪ್ರಮುಖವಾಗಿ ಕೃಪಾಲ್ ಅವರ ಪ್ರಸ್ತಾವಿತ ಬಡ್ತಿಗೆ ಕೇಂದ್ರ ಸರ್ಕಾರ ಮಾಡಿದ್ದ ಪ್ರಾಥಮಿಕ ಆಕ್ಷೇಪವನ್ನು ಕೊಲಿಜಿಯಂ ತಳ್ಳಿಹಾಕಿದೆ. ಇನ್ನೂ, ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆಯಲ್ಲಿ ಸೌರಭ್ ಕೃಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಪ್ರಸ್ತಾವವನ್ನು ಅನುಮೋದಿಸಲಾಗಿದೆ ಎಂಬ ಕೊಲಿಜಿಯಂ ನಿರ್ಣಯವನ್ನು ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಅಲ್ಲದೆ, ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಕೊಲಿಜಿಯಂ, ಕೃಪಾಲ್ ಅವರನ್ನು ಶಿಫಾರಸ್ಸು ಮಾಡಿದೆ. ಕೃಪಾಲ್ ಅವರು ಐತಿಹಾಸಿಕ ನವತೇಜ್ ಸಿಂಗ್ ಜೊಹಾರ್ ಪ್ರಕರಣದಲ್ಲಿ ಮುಂಚೂಣಿ ವಕೀಲರಾಗಿದ್ದು, ೨೦೧೮ರ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಅಟಾರ್ನಿ ಜನರಲ್ ಮತ್ತು ಹಿರಿಯ ವಕೀಲ ಮುಕುಲ್ ರೋಹಟ್ಗಿ, ಕೃಪಾಲ್ ಅವರ ಬಡ್ತಿ ಸುಧೀರ್ಘ ಕಾಲದಿಂದ ಬಾಕಿ ಇದೆ. ಸಲಿಂಗಕಾಮವನ್ನು ಅಪರಾಧ ಕೃತ್ಯ ಎಂದು ಪರಿಗಣಿಸುವ ಭಾರತೀಯ ದಂಡಸಂಹಿತೆಯ ಸೆಕ್ಷನ್ ೩೭೭ನ್ನು ರದ್ದುಡಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಪ್ರಶಂಸನೀಯವಾಗಿದೆ.