ದೆಹಲಿ ಸರ್ಕಾರ ಚಟುವಟಿಕೆ ಸ್ಥಗಿತಕ್ಕೆ ಹೈಕೋರ್ಟ್ ಗರಂ

ನವದೆಹಲಿ,ಏ.೩೦- ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನುಪಸ್ಥಿತಿಯಿಂದ ದೆಹಲಿ ಸರ್ಕಾರದ ಕಾರ್ಯಚಟುವಟಿಕೆಗಳು, ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಕಾರ್ಯ “ಸ್ಥಗಿತಗೊಂಡಿದೆ” ಎಂದು ದೆಹಲಿ ಹೈಕೋರ್ಟ್ ಹೇಳಿದೆ.

“ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿ” ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಯೊಬ್ಬರು ದೀರ್ಘಾವಧಿಯವರೆಗೆ ತನ್ನ ಕೆಲಸ ಕಾರ್ಯಗಳಿಂದ ಗೈರುಹಾಜರಾಗಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಈ ವಿಷಯ ಒತ್ತಿಹೇಳಿದೆ

ಸುಮಾರು ಎರಡು ಲಕ್ಷ ಎಂಸಿಡಿ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು, ಬರವಣಿಗೆ ಸಾಮಗ್ರಿಗಳು ಮತ್ತು ಸಮವಸ್ತ್ರಗಳನ್ನು ಸಕಾಲದಲ್ಲಿ ಒದಗಿಸಲು ದೆಹಲಿ ಸರ್ಕಾರ ಮತ್ತು ಎಂಸಿಡಿ ವಿಫಲವಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅನುಪಸ್ಥಿತಿ ಮಕ್ಕಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ

ಮಹಾನಗರ ಪಾಲಿಕೆ ಆಯುಕ್ತರಿಗೆ ೫ ಕೋಟಿಗಿಂತ ಹೆಚ್ಚಿನ ಯಾವುದೇ ಹಣಕಾಸಿನ ಅಧಿಕಾರ ಹೊಂದಿದ್ದರೆ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ ಎಂಬ ಸರ್ಕಾರದ ಹೇಳಿಕೆಯನ್ನು ತಳ್ಳಿಹಾಕಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪಿಎಸ್ ಅರೋರಾ ಅವರ ಪೀಠ, ಪಠ್ಯ ಪುಸ್ತಕ ಖರೀದಿಗೆ ಹಣವನ್ನು ಬಳಸುವ ನಿರ್ದಿಷ್ಟ ಕಾರ್ಯಕ್ಕಾಗಿ ಮಿತಿ ತೆಗೆದುಹಾಕಿದೆ

ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ದೆಹಲಿ ಸರ್ಕಾರದ ಅಸಮರ್ಥತೆಯಿಂದಾಗಿ ಸಮಸ್ಯೆ ಎದುರಿಸುವುದು ಸರಿಯಲ್ಲ. ಇತರ ಸಂಸ್ಥೆಗಳನ್ನು ದೂಷಿಸುವುದು “ಮೊಸಳೆ ಕಣ್ಣೀರು ಸುರಿಸುವುದಕ್ಕೆ” ಸಮಾನವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ದೆಹಲಿಯ ನಗರಾಭಿವೃದ್ಧಿ ಸಚಿವ ಸೌರಭ್ ಭಾರದ್ವಾಜ್ ಅವರು ನೀಡಿದ ಹೇಳಿಕೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಿಗೆ ಹಣಕಾಸಿನ ಅಧಿಕಾರ ನೀಡಲು ಮುಖ್ಯಮಂತ್ರಿ ಅವರ ಒಪ್ಪಿಗೆ ಅಗತ್ಯವಿದೆ ಎಂದು ಹೇಳಿದ್ದಾರೆ

“ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ಪ್ರತಿದಿನ ಪ್ರಮುಖ ಮತ್ತು ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು” ಹೀಗಿರುವಾಗ ದೀರ್ಘಕಾಲ ಗೈರು ಹಾಜರಿ ಸರಿಯಲ್ಲ ಎಂದು ನ್ಯಾಯಪೀಠ ಹೇಳಿದೆ