ದೆಹಲಿ ಶಾಲೆಗಳಿಗೆ ಬಾಂಬ್ ಬೆದರಿಕೆ

ತನಿಖೆ ಚುರುಕು

ನವದೆಹಲಿ,ಮೇ ೧:ರಾಜಧಾನಿ ದೆಹಲಿಯ ೧೦೦ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಶಾಲೆಗಳಿಂದ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.
ಬಾಂಬ್ ಇಟ್ಟಿರುವ ಬಗ್ಗೆ ಇ-ಮೇಲ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಬಾಂಬ್ ನಿಷ್ಕ್ರಿಯ ದಳ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶೋಧಕಾರ್ಯ ಕೈಗೊಂಡಿತು.
ಇಂದು ಮುಂಜಾನೆ ದೆಹಲಿಯ ಚಾಣಕ್ಯಪುರಿಯಲ್ಲಿರುವ ಸಂಸ್ಕೃತಿ, ಮದರ್‌ಮೇರಿ, ಡೆಲ್ಲಿಪಬ್ಲಿಕ್ ಸ್ಕೂಲ್ ಸೇರಿದಂತೆ ೧೦೦ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಇಟ್ಟಿರುವ ಬೆದರಿಕೆ ಕರೆಗಳು ಬಂದಿದೆ. ಇದರಿಂದ ಆತಂಕಗೊಂಡ ಶಾಲಾ ಆಡಳಿತ ಮಂಡಳಿ ಎಲ್ಲ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದೆ.
ಬಾಂಬ್ ನಿಷ್ಕ್ರಿಯ ತಂಡ, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಶಾಲೆಗಳ ಮೂಲೆ ಮೂಲೆಗಳಲ್ಲಿ ಜಾಲಾಡಿದೆ. ಆದರೆ, ಯಾವುದೇ ಬಾಂಬ್‌ಗಳು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದು ಹುಸಿ ಕರೆ ಎಂದು ಹೇಳಲಾಗಿದೆ. ಆದರೆ,ಬಾಂಬ್ ಇಟ್ಟಿರುವುದಾಗಿ ಶಾಲೆಗಳಿಗೆ ಇ-ಮೇಲ್ ಬೆದರಿಕೆ ಹಾಕಿರುವ ಶಂಕಿತ ವ್ಯಕ್ತಿಯ ಮಾಹಿತಿ ಲಭ್ಯವಾಗಿಲ್ಲ.
ಐಪಿ ವಿಳಾಸದ ಹೆಜ್ಜೆ ಜಾಡನ್ನು ಹಿಡಿದು ದೆಹಲಿ ಪೊಲೀಸರು ಇ-ಮೇಲ್ ರವಾನಿಸಿದ ವ್ಯಕ್ತಿಗಾಗಿ ಶೋಧಕಾರ್ಯ ನಡೆಸಿದೆ.
ಆದರೆ, ಆತ ಎಲ್ಲಿಂದ ಇ-ಮೇಲ್ ರವಾನಿಸಿದ್ದಾನೆಂದು ಪತ್ತೆಯಾಗಿಲ್ಲ. ಶಾಲೆಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವ ದೃಷ್ಟಿಯಿಂದ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇ-ಮೇಲ್ ರವಾನಿಸಿದ್ದಾರೆ.
ಈ ಸಂಬಂಧ ಸೈಬರ್ ಅಪರಾಧ ಘಟಕವು ಐಪಿ ವಿಳಾಸದ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಶಾಲೆಯಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಇ-ಮೇಲ್ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಮುನ್ನೆಚ್ಚೆರಿಕಾ ಕ್ರಮ ಕೈಗೊಂಡು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ಡೆಲ್ಲಿ ಪಬ್ಲಿಕ್‌ಸ್ಕೂಲ್ ಆಡಳಿತ ಮಂಡಳಿ ತಿಳಿಸಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಭಯಭೀತರಾದ ಪೋಷಕರು ಶಾಲೆಗಳತ್ತ ದೌಡಾಯಿಸಿ ಮಕ್ಕಳನ್ನು ತಕ್ಷಣ ಮನೆಗೆ ಕರೆದುಕೊಂಡು ಹೋಗುವ ಕಾರ್ಯದಲ್ಲಿ ನಿರತರಾದರು.
ಈ ಮಧ್ಯೆ ದೆಹಲಿ ಶಿಕ್ಷಣ ಸಚಿವ ಅತಿಶಿ ಪ್ರತಿಕ್ರಿಯೆ ನೀಡಿ ಎಲ್ಲ ಶಾಲೆಗಳಲ್ಲೂ ಶಂಕಿತ ಅಥವಾ ಬಾಂಬ್‌ನಂತಹ ವಸ್ತುಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಪೋಷಕರು ಮತ್ತು ನಾಗರಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಪೊಲೀಸರು ಮತ್ತು ಶಾಲೆಗಳೊಂದಿಗೆ ಸತತ ಸಂಪರ್ಕ ಹೊಂದಿರುವುದಾಗಿ ತಿಳಿಸಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿ ಆರ್‌ಕೆಪುರಂನಲ್ಲಿರುವ ಡೆಲ್ಲಿ ಪಬ್ಲಿಕ್‌ಸ್ಕೂಲ್‌ಗೆ ಇದೇ ರೀತಿಯ ಬಾಂಬ್ ಬೆದರಿಕೆ ಕರೆಗಳು ಬಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.