ದೆಹಲಿ ವಾಯುಮಾಲಿನ್ಯ ಯಥಾಸ್ಥಿತಿ

ನವದೆಹಲಿ,ನ.೧೬- ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು ಮುಂದಿನ ಮೂರು ದಿನಗಳ ಕಾಲ ಯಾವುದೇ ಸುಧಾರಣೆ ಕಂಡು ಬರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಭವಿಷ್ಯ ನುಡಿದಿದ್ದಾರೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ವಾಯುಮಾಲಿನ್ಯ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್ ಮಾಡುವುದಾಗಿ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದರು. ಇದರ ಬೆನ್ನಲ್ಲೆ ಇನ್ನೂ ಮೂರು ದಿನಗಳ ಕಾಲ ವಾಯುಮಾಲಿನ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬರುವುದಿಲ್ಲ ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ.
ದೆಹಲಿಯ ಆಸುಪಾಸಿನ ಪ್ರದೇಶಗಳಲ್ಲಿ ರೈತರು ಬೆಳೆದ ಕೂಳೆಗಳ ಸುಡುವುದು ಹೆಚ್ಚಾಗಿರುವುದರಿಂದ ರಾಜಧಾನಿಯಲ್ಲಿ ಶೇ. ೧೦ ರಷ್ಟು ವಾಯುಮಾಲಿನ್ಯ ದಾಖಲಾಗಿದೆ. ಇದು ನ. ೪ರ ನಂತರ ಅತ್ಯಂತ ಕಡಿಮೆ ಗುಣಮಟ್ಟ ಇದಾಗಿದೆ.
ದೆಹಲಿ ವಾಯುಮಾಲಿನ್ಯ ನಿಯಂತ್ರಣ ಸಮಿತಿ ನೀಡಿರುವ ಮಾಹಿತಿ ಅನುಸಾರ ಪ್ರತಿ ವರ್ಷ ನ. ೧ ರಿಂದ ೧೫ರ ವರೆಗೆ ರಾಜಧಾನಿಯಲ್ಲಿ ವಾಯುಮಾಲಿನ್ಯ ಅತ್ಯಂತ ಕೆಟ್ಟದಾಗಿರುತ್ತದೆ ಎಂದು ಹೇಳಿದೆ.
ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೊಲಗಳಲ್ಲಿ ತ್ಯಾಜ್ಯಗಳನ್ನು ಸುಡುವುದರಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಬಿಗಡಾಯಿಸಲು ಪ್ರಮುಖ ಕಾರಣವಾಗಿದೆ. ದಹಲಿಯಲ್ಲಿ ಕಳೆದ ೨೪ ತಾಸುಗಳ ಅವಧಿಯಲ್ಲಿ ವಾಯುಮಾಲಿನ್ಯ ಸೂಚ್ಯಾಂಕ ೩೫೩ ರಷ್ಟು ದಾಖಲಾಗಿದೆ.
ಮುಂದಿನ ಮೂರು ದಿನಗಳ ಅವಧಿಯಲ್ಲಿ ವಾಯುಮಾಲಿನ್ಯ ಅತ್ಯಂತ ಕೆಟ್ಟದಾಗಿರಲಿದೆ ಎಂದು ಭಾರತೀಯ ವಾಯು ಮಾಲಿನ್ಯ ಇಲಾಖೆ ತಿಳಿಸಿದೆ.
ದೆಹಲಿಯಲ್ಲಿ ತಾಪಮಾನ ಗರಿಷ್ಠ ೨೬.೪ ಡಿಗ್ರಿ, ಕನಿಷ್ಠ ೧೦.೩ ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ವಾಡಿಕೆಗಿಂತ ೩ ಡಿಗ್ರಿಯಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದೆ.