ದೆಹಲಿ ವರಿಷ್ಠರ ಕೃಪಾಕಟಾಕ್ಷಕ್ಕೆ ಕಾದು ಕುಳಿತಿರುವ ಸಚಿವಕಾಂಕ್ಷಿಗಳು

ಬೆಂಗಳೂರು,ಜು.೨೯- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಕೆಲ ಸಚಿವಾಕಾಂಕ್ಷಿ ಶಾಸಕರುಗಳು ಈಗಾಗಲೇ ದೆಹಲಿಗೆ ತೆರಳಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಲಾಬಿ ನಡೆಸಿದ್ದಾರೆ.
ಸಂಪುಟ ರಚನೆಯಲ್ಲಿ ಹೈಕಮಾಂಡ್ ನಿರ್ಣಯ ಅಂತಿಮ ಎಂದೇ ಭಾವಿಸಿರುವ ಶಾಸಕರುಗಳು ದೆಹಲಿಯಾತ್ರೆ ನಡೆಸಿ ವರಿಷ್ಠ ಮಟ್ಟದಲ್ಲಿ ತಮಗಿರುವ ಪ್ರಭಾವ ಬೆಳೆಸಿ ಸಚಿವರಾಗಲು ಕಸರತ್ತು ನಡೆಸಿದ್ದಾರೆ.
ನೂತನ ಸಚಿವ ಸಂಪುಟದಲ್ಲಿ ಹಿರಿಯ ಸಚಿವರುಗಳಿಗೆ ಕೊಕ್ ನೀಡಿ ಹೊಸಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬ ಮಾತುಗಳು ಬಿಜೆಪಿಯಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದ್ದು, ಹಿರಿಯ ಶಾಸಕರುಗಳಾದ ಉಮೇಶ್‌ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಹಲವು ಶಾಸಕರು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪರವರ ಸಂಪುಟದಲ್ಲಿ ಸಚಿವರಾಗಿದ್ದ ೧೦ಕ್ಕೂ ಹೆಚ್ಚು ಸಚಿವರುಗಳನ್ನು ಕೈಬಿಟ್ಟು, ಹೊಸ ಮುಖಗಳಿಗೆ ಅದರಲ್ಲೂ ಮೂಲ ಬಿಜೆಪಿಯವರಿಗೆ ಮಣೆ ಹಾಕುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆಗಳು ನಡೆದಿದ್ದು, ವರಿಷ್ಠರೂ ಸಹ ಹೊಸಬರಿಗೆ ಅವಕಾಶ ನೀಡುವ ಚಿಂತನೆ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾದ ೧೭ ಶಾಸಕರ ಪೈಕಿ ಯಡಿಯೂರಪ್ಪ ಸಂಪುಟದಲ್ಲಿ ೧೧ ವಲಸಿಗ ಶಾಸಕರಿಗೆ ಸಚಿವ ಸ್ಥಾನ ದಯಪಾಲಿಸಲಾಗಿತ್ತು. ಈಗ ಈ ವಲಸಿಗರಲ್ಲಿ ೫-೬ ಮಂದಿಗೆ ಮಾತ್ರ ಸಚಿವ ಸ್ಥಾನ ನೀಡುವ ಬಗ್ಗೆಯೂ ಬಿಜೆಪಿಯಲ್ಲಿ ಚರ್ಚೆಗಳು ನಡೆದಿದ್ದು, ವಲಸಿಗ ಶಾಸಕರಲ್ಲಿ ಯಾರಿಗೆ ಅದೃಷ್ಟ ಖುಲಾಯಿಸುತ್ತದೋ ಎಂಬುದು ಕುತೂಹಲ ಮೂಡಿಸಿದೆ.
ವಲಸಿಗ ಸಚಿವರುಗಳಾಗಿದ್ದ ಬಿ.ಸಿ. ಪಾಟೀಲ, ಶ್ರೀಮಂತ ಪಾಟೀಲ, ಆರ್. ಶಂಕರ್, ನಾರಾಯಣಗೌಡ, ಶಿವರಾಂ ಹೆಬ್ಬಾರ್, ಅವರುಗಳಿಗೆ ಮತ್ತೆ ಸಚಿವಸ್ಥಾನ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಉಳಿದಂತೆ ಡಾ. ಕೆ. ಸುಧಾಕರ್, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು, ಎಂ.ಟಿ.ಬಿ ನಾಗರಾಜ್, ಗೋಪಾಲಯ್ಯ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ.
ಯಡಿಯೂರಪ್ಪ ಸಂಪುಟದಲ್ಲಿ ಹಿರಿಯ ಸಚಿವರುಗಳಾದ ಕೆ.ಎಸ್. ಈಶ್ವರಪ್ಪ, ಸುರೇಶ್‌ಕುಮಾರ್, ಸಿ.ಸಿ ಪಾಟೀಲ್, ಕೋಟಾಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ ಇವರುಗಳಿಗೆ ಸಂಪುಟದಿಂದ ಕೊಕ್ ನೀಡುವ ಸಾಧ್ಯತೆಗಳಿದ್ದು, ಹೊಸದಾಗಿ ಶಾಸಕರುಗಳಾದ ಸುನಿಲ್‌ಕುಮಾರ್, ಪೂರ್ಣಿಮಾ ಶ್ರೀನಿವಾಸ್, ಹಾಲಪ್ಪ ಆಚಾರ್, ಬಸನಗೌಡ ಪಾಟೀಲ್ ಯತ್ನಾಳ್, ವಿ. ಮುನಿರತ್ನ, ರಾಜುಗೌಡ, ಕಳಸಪ್ಪ ಬಂಡಿ, ಎಂ.ಪಿ. ಕುಮಾರಸ್ವಾಮಿ, ಶಿವನಗೌಡ ನಾಯಕ್ ಎಸ್.ಎ. ರಾಮದಾಸ್. ರವೀಂದ್ರನಾಥ್, ರೇಣುಕಾಚಾರ್ಯ, ತಿಪ್ಪಾರೆಡ್ಡಿ ಇವರುಗಳು ಸಂಪುಟ ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದ್ದ ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್ ಇವರುಗಳು ಸಚಿವರಾಗಲಿದ್ದು, ಹಾಗೆಯೇ ಹಿರಿಯ ಸಚಿವರುಗಳಾದ ಆರ್. ಅಶೋಕ್, ಶ್ರೀರಾಮುಲು, ಗೋವಿಂದ ಕಾರಜೋಳ, ಡಾ. ಸಿ.ಎನ್ ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ವಿ. ಸೋಮಣ್ಣ, ಮಾಧುಸ್ವಾಮಿ ಇವರೆಲ್ಲ ಸಚಿವರಾಗಿ ಮುಂದುವರೆಯಲಿದ್ದಾರೆ. ವಿಧಾನಸಭಾಧ್ಯಕ್ಷ ಕಾಗೇರಿ ಅವರು ಸಚಿವರಾಗುವ ಸಾಧ್ಯತೆ ಇದೆ. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಸಂಪುಟ ಸೇರುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಈ ಪೈಕಿ ಆರ್. ಅಶೋಕ್, ಶ್ರೀರಾಮುಲು, ಗೋವಿಂದ ಕಾರಜೋಳ, ಡಾ. ಸಿ.ಎನ್ ಅಶ್ವತ್ಥ ನಾರಾಯಣ ಇವರುಗಳು ಉಪಮುಖ್ಯಮಂತ್ರಿ ಹುದ್ದೆ ಗಿಟ್ಟಿಸಲು ಪ್ರಯತ್ನ ನಡೆಸಿದ್ದಾರೆ.
ಇನ್ನೆರೆಡು ಮೂರು ದಿನಗಳಲ್ಲಿ ತೀರ್ಮಾನ
ನೂತನ ಸಚಿವ ಸಂಪುಟ ರಚನೆಯ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ದೆಹಲಿಗೆ ಹೋಗುವ ಸಾಧ್ಯತೆಗಳಿದ್ದು, ವರಿಷ್ಠರೊಡನೆ ಚರ್ಚೆ ನಡೆಸಿ ಭಾನುವಾರದ ಹೊತ್ತಿಗೆ ಸಂಪುಟ ರಚನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಾಧ್ಯತೆಗಳು ಹೆಚ್ಚಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಸೋಮವಾರ ನೂತನ ಸಚಿವರ ಪ್ರಮಾಣವಚನ ಆಗಲಿದೆ.
ಈ ಬಾರಿಯ ಸಚಿವ ಸಂಪುಟದಲ್ಲಿ ಎಲ್ಲ ಜಿಲ್ಲೆ, ಜಾತಿ, ಸಮುದಾಯಗಳಿಗೂ ಪ್ರಾತಿನಿಧ್ಯ ನೀಡುವ ಸಂಬಂಧ ಚರ್ಚೆಗಳು ನಡೆದಿದ್ದು, ಪ್ರಾದೇಶಿಕತೆ, ಸಾಮಾಜಿಕ ನ್ಯಾಯ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಂಪುಟ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ.