ದೆಹಲಿ ರೈತರ ಪ್ರತಿಭಟನೆ ನಿರಶನ ಅಂತ್ಯ: ಕೇಂದ್ರದ ವಿರುದ್ಧ ರ್ಯಾಲಿ, ಕರಾಳ ಕಾಯ್ದೆ ದಹಿಸಿ ಪ್ರತಿಭಟನೆ

ಕಲಬುರಗಿ.ಡಿ.31:ರೈತರ ಹಕ್ಕೊತ್ತಾಯಗಳಿಗಾಗಿ ನಗರದ ಜಗತ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಯ ಆವರಣದ ಮುಂದೆ ಆರಂಭಿಸಿದ ನಿರಂತರ ಧರಣಿಯು ಹದಿನೇಳನೇ ದಿನವನ್ನು ಗುರುವಾರ ಪೂರೈಸಿ ಮೊದಲನೆ ಹಂತದ ಸಮಾರೋಪದ ನಿಮಿತ್ಯ ಪಾದಯಾತ್ರೆ, ಮೆರವಣಿಗೆ ಬಹಿರಂಗ ಸಭೆ ಮತ್ತು ಸಭೆಯಲ್ಲಿ ರೈತ ವಿರೋಧಿ ಕರಾಳ ಕಾಯ್ದೆಗಳ ದಹಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಸಮಾರೋಪದ ಪಾದಯಾತ್ರೆಯು ನ್ಯಾಷನಲ್ ಕಾಲೇಜ್ ವೃತ್ತ (ಸಾತ್ ಗುಂಬಜ್ ವೃತ್ತ)ದಿಂದ ಆರಂಭಗೊಂಡು ಸರಾಫ್ ಬಜಾರ್, ತರಕಾರಿ ಮಾರುಕಟ್ಟೆಯ ಮೂಲಕ ಸೂಪರ್ ಬಜಾರ್‍ನಿಂದ ಬಂದು ಜಗತ್ ವೃತ್ತದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು, ವಿದ್ಯುತ್ ಬಿಲ್ 2020, ಭೂಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯಾ ನಿಷೇಧ ಸುಗ್ರಿವಾಜ್ಞೆಯ ಪ್ರತಿಗಳನ್ನು ದಹಿಸಲಾಯಿತು.
ಬಹಿರಂಗ ಸಭೆಯನ್ನುದ್ದೇಶಿಸಿ ಕಾ. ಎಂ.ಬಿ. ಸಜ್ಜನ್, ಕಾ. ಆರ್.ಕೆ. ಹುಡಗಿ, ಕಾ. ಕಾಶಿನಾಥ್ ಅಂಬಲಗಿ, ಕಾ. ಭೀಮಶೆಟ್ಟಿ ಯಂಪಳ್ಳಿ, ಕಾ. ಕೆ. ನೀಲಾ, ಕಾ. ಶರಣಬಸವ ಮಮಶೆಟ್ಟಿ, ದತ್ತಾತ್ರೇಯ್ ಇಕ್ಕಳಕಿ, ಕಾ. ಅಲ್ತಾಫ್ ಇನಾಮದಾರ್, ಕಾ. ಜಾವೇದ್, ಕಾ. ಮೇಘರಾಜ್ ಕಠಾರೆ, ಕಾ. ಮೌಲಾ ಮುಲ್ಲಾ ಮುಂತಾದವರು ಮಾತನಾಡಿದರು. ಪಾದಯಾತ್ರೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ನಂದಾದೇವಿ ಮಂಗೊಂಡಿ, ಅಧ್ಯಕ್ಷೆ ಅಮೀನಾ ಬೇಗಂ, ಕೃಷಿಕೂಲಿಕಾರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದಪ್ಪ ಪೂಜಾರಿ, ಶ್ರೀಮಂತ್ ಬಿರಾದಾರ್, ಜಗದೇವಿ ಹೆಗಡೆ, ಮಲ್ಲಮ್ಮ ಕೋಡ್ಲಿ ಮುಂತಾದವರು ಭಾಗವಹಿಸಿದ್ದರು.
ದೇಶದ ಸಂಪತ್ತನ್ನು ಕಾಪೆರ್Çೀರೇಟ್‍ಗಳ ವಶ ಮಾಡಲು ಕೇಂದ್ರ ಸರ್ಕಾರವು ಕೃಷಿ ವಿರೋಧಿ ಕಾಯ್ದೆಗಳನ್ನು ತಂದಿದೆ. ಸ್ವಾಮಿನಾಥನ್ ವರದಿ ಜಾರಿ ಮಾಡಲು ದೇಶದ ರೈತರು ಆಗ್ರಹಿಸಿದ್ದಾರೆ. ಈ ಕರಾಳ ಕಾಯ್ದೆಗಳಿಗಾಗಿ ಯಾರೂ ಕೇಳಿಲ್ಲ. ಆದಾಗ್ಯೂ, ಸ್ವಾಮಿನಾಥನ್ ವರದಿಯನ್ನು ಮೂಲೆಗೆ ತಳ್ಳಿ ದೇಶ ಜನತೆಯು ಉಪವಾಸದಿಂದ ನರಳುವಂತೆ ಮಾಡುವ, ದೇಶದ ವ್ಯಾಪಾರವೇ ಕುಸಿಯುವಂತಾಗಿಸುವ, ರೈತರ ಕೈಯಿಂದ ಜಾರಿ ಭೂಮಿಯು ಕಂಪೆನಿಕರಣದ ವಶವಾಗುವ, ರೈತರು ಬೆಳೆದ ಆಹಾರವನ್ನು ಕಾಪೋರೇಟ್‍ರಗಳ ಗೋದಾಮು ಸೇರಿ ಕೃತಕ ಅಭಾವ ನಿರ್ಮಿಸಲು ಅನುಕೂಲ ಕಲ್ಪಿಸುವ ಮತ್ತು ತನ್ಮೂಲಕ ಜನತೆಯು ದುಬಾರಿ ಬೆಲೆಯಲ್ಲಿ ಆಹಾರ ಧಾನ್ಯ ಖರಿದಿಸುವ ಒತ್ತಡಕ್ಕೆ ಒಳಗಾಗುವ, ಅಪೌಷ್ಟಿಕತೆ ಹೆಚ್ಚಳವಾಗುವಂತೆ ಮಾಡುವ ಮತ್ತು ಅನುಕ್ರಮವಾಗಿ ಎಪಿಎಂಸಿ, ವ್ಯಾಪಾರ, ಕೃಷಿ ಹೀಗೆ ಎಲ್ಲವೂ ನಾಶವಾಗುವಂತೆ ಮಾಡುವ ಈ ಕಾಯ್ದೆಗಳು ಭಯಂಕರ ಅಪಾಯಕಾರಿಯಾಗಿವೆ ಎಂದು ಪ್ರತಿಭಟನೆಕಾರರು ಕಳವಳ ವ್ಯಕ್ತಪಡಿಸಿದರು.
ಆದ್ದರಿಂದಲೇ ರೈತರು ಜೀವದ ಹಂಗು ತೊರೆದು ದೆಹೆಲಿಯಲ್ಲಿಯೂ ದೇಶದ ಅನೇಕ ರಾಜ್ಯಗಳಲ್ಲಿಯೂ ಈ ಕಾಯ್ದೆಗಳ ವಾಪಸಾತಿಗಾಗಿ ಹೋರಾಡುತ್ತಿದ್ದಾರೆ. ರೈತರು ಸಕಲ ಜೀವಾತ್ಮರಿಗೆ ಅನ್ನವಿತ್ತು ಪೆÇರೆವ ಎರಡನೆಯ ತಾಯಿಯಾಗಿದ್ದಾಳೆ. ಆದ್ದರಿಂದಲೇ ರಾಜಿರಹಿತ ಹೋರಾಟಕ್ಕೆ ಇಳಿದಿದ್ದಾಳೆ ಭಾರತದ ತಾಯಿ. ಭಾರತದ ತಾಯ್ತನದ ಸಂಸ್ಕøತಿಯನ್ನೇ ನಾಶ ಮಾಡಲು ಕೇಂದ್ರ ಸರಕಾರ ಸಂಚು ಹೆಣೆದಿದೆ. ದೇಶ ವುದೇಶಗಳಿಂದ ಭಾರತದ ಕೃಷಿಮಾತೆಯ ಹೋರಾಟಕ್ಕೆ ಬೆಂಬಲದ ಮಹಾಪೂರವೇ ಹರಿದು ಬರುತ್ತಿದೆ. ಈ ಕಾಯ್ದೆಗಳ ಒಳಗಿರುವ ಅಪಾಯಕಾರಿ ಅಂಶಗಳನ್ನು ಮುಚ್ಚಿಟ್ಟು ರೈತರ ಹಿತದಲ್ಲಿದೆ ಎಂಬ ಸುಳ್ಳನ್ನು ಪ್ರಚಾರ ಮಾಡುತ್ತಿದೆ ಬಿಜೆಪಿ. ಆದರೆ ವಾಸ್ತವದಲ್ಲಿ ಈ ಕಾಯ್ದೆಗಳು ರೈತ ವಿರೋಧಿ ಕಾಯ್ದೆಗಳಾಗಿವೆ ಎಂಬುದನ್ನು ಎಲ್ಲ ಪ್ರಜ್ಞಾವಂತರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತಿಭಟನೆಕಾರರು ಹೇಳಿದರು.
ಹದಿನೇಳು ದಿನಗಳ ಕಾಲ ಸತತವಾಗಿ ನಡೆದ ಧರಣಿಯಲ್ಲಿ ಪಾಲ್ಹೊಂಡ ಸಮಸ್ತ ಜನತೆಗೆ ಕ್ರಾಂತಿಕಾರಿ ವಂದನೆಗಳನ್ನು ಸಲ್ಲಿಸಲಾಯಿತು. ಸಭೆಯಲ್ಲಿ ಕೇಂದ್ರದ ಮಾರಕ ಕಾಯ್ದೆಗಳನ್ನು ವಿರೋಧಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ಜಾಥಾ ನಡೆಸಲು ತೀರ್ಮಾನಿಸಲಾಯಿತು. ಸಣ್ಣವನಲ್ಲೋ ನೀ ಪುಣ್ಯವಂತ ಎಂಬ ರೈತ ಗೀತೆಯ ಮೂಲಕ ಬಹಿರಂಗ ರ್ಯಾಲಿ ಮುಕ್ತಾಯಗೊಳಿಸಲಾಯಿತು.