ದೆಹಲಿ ಮುನ್ಸಿಪಲ್ ಚುನಾವಣೆ ಮಹಿಳೆಯರಿಗೆ ಎಎಪಿ ಆದ್ಯತೆ

ನವದೆಹಲಿ, ನ.೧೩-ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಆಮ್ ಆದ್ಮಿ ಪಕ್ಷವು ಬಿಡುಗಡೆಗೊಳಿಸಿದ ಒಟ್ಟು ೧೧೭ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ೬೦ಕ್ಕೂ ಹೆಚ್ಚು ಮಹಿಳೆಯರಿಗೆ ಸ್ಥಾನವನ್ನು ನೀಡಲಾಗಿದೆ.
ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಸುದೀರ್ಘ ಸಭೆಯ ನಂತರ ಅಂತಿಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಯಿತು.
ಅಂತಿಮ ಪಟ್ಟಿಯಲ್ಲಿ ೬೦ಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನವನ್ನು ನೀಡಲಾಗಿದೆ. ಇದೇ ಸಂದರ್ಭದಲ್ಲಿ ಶೇ.೯೦ರಷ್ಟು ಅಭ್ಯರ್ಥಿಗಳು ತಳಮಟ್ಟದಲ್ಲಿ ಕೆಲಸ ಮಾಡುವ ಆಪ್ ಕಾರ್ಯಕರ್ತರೇ ಆಗಿದ್ದಾರೆ ಎಂದು ಆಪ್ ಹೇಳಿಕೆಯಲ್ಲಿ ತಿಳಿಸಿದೆ.
ಟಿಕೆಟ್ ಪಡೆಯುವುದಕ್ಕಾಗಿ ೨೦,೦೦೦ ಅರ್ಜಿ ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧಿಸುವುದಕ್ಕಾಗಿ ಟಿಕೆಟ್ ಪಡೆಯಲು ೨೦,೦೦೦ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷವು ಹೇಳಿಕೊಂಡಿದೆ.
ಈ ಮೊದಲೇ ಘೋಷಿಸಿದಂತೆ ದೆಹಲಿ ಮಹಾನಗರ ಪಾಲಿಕೆಯ ೨೫೦ ವಾರ್ಡ್‌ಗಳಿಗೆ ಡಿಸೆಂಬರ್ ೪ರಂದು ಚುನಾವಣೆ ನಡೆಯಲಿದೆ. ತದನಂತರ ಡಿಸೆಂಬರ್ ೭ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ.